ಟಾಲಿವುಡ್ ನ್ಯಾಚುರಲ್ ಸ್ಟಾರ್ ನಾನಿ ಮತ್ತು ಕೇರಳ ಬ್ಯುಟಿ ನಜ್ರಿಯಾ ನಜಿಮ್ ನಟಿಸಿದ ಅಂಟೆ ಸುಂದರಾನಿಕಿ ಸಿನಿಮಾ ಜೂನ್ ಹತ್ತಕ್ಕೆ ರಿಲೀಸ್ ಆಗುತ್ತಿದೆ. ಈ ಸಿನಿಮಾ ಪ್ರಮೋಷನ್ ಭಾಗವಾಗಿ ನಾನಿ ಆಡಿದ ಮಾತೊಂದು ಕನ್ನಡಿಗರ ಸಿಟ್ಟಿಗೆ ಗುರಿಯಾಗಿದೆ.
ಅಂಟೆ ಸುಂದರಾನಿಕಿ ಸಿನೆಮಾ ಕನ್ನಡ ಹೊರತುಪಡಿಸಿ ದಕ್ಷಿಣ ಭಾರತದ ಉಳಿದೆಲ್ಲ ಭಾಷೆಗಳಲ್ಲಿ ರಿಲೀಸ್ ಮಾಡಲು ಚಿತ್ರತಂಡ ತಯಾರಿ ಮಾಡಿಕೊಂಡಿದೆ. ಇದನ್ನು ಸಮರ್ಥನೆ ಮಾಡುವ ಭರದಲ್ಲಿ ನಾನಿ ಆಡಿದ ಮಾತುಗಳು ವಿವಾದಕ್ಕೆ ಕಾರಣ ಆಗಿವೆ. ಕನ್ನಡದ ಅಭಿಮಾನಿಗಳು ಹರ್ಟ್ ಆಗಿದ್ದಾರೆ. ಇದಕ್ಕೆ ಕೂಡಲೇ ಸೋಶಿಯಲ್ ಮೀಡಿಯಾ ವೇದಿಕೆಯಲ್ಲಿ ಸ್ಪಂದಿಸಿದ ನಾನಿ, ಕನ್ನಡಿಗರ ಕ್ಷಮೆ ಕೂಡಾ ಕೇಳಿದ್ದಾರೆ.
ಅಸಲಿಗೆ ನಡೆದಿದ್ದು ಏನು?
ಅಂಟೆ ಸುಂದರಾನಿಕಿ ಟೀಸರ್ ಇವೆಂಟ್ ನಲ್ಲಿ ಕನ್ನಡ ಡಬ್ಬಿಂಗ್ ವರ್ಶನ್ ಬಗ್ಗೆ ನಾನಿ ಮಾತನಾಡುತ್ತಾ, ಈ ಚಿತ್ರವನ್ನು ಕನ್ನಡ ಪ್ರೇಕ್ಷಕರು ತೆಲುಗಿನಲ್ಲೇ ನೋಡುತ್ತಾರೆ. ಅದಕ್ಕೆ ಈ ಸಿನೆಮಾವನ್ನು ಕನ್ನಡಕ್ಕೆ ಡಬ್ ಮಾಡುತ್ತಿಲ್ಲ. ಯಾಕೆಂದರೆ ತುಂಬಾ ಮಂದಿ ಕನ್ನಡಿಗರು ತೆಲುಗು ಭಾಷೆಯನ್ನು ಅರ್ಥ ಮಾಡಿಕೊಳ್ಳುತ್ತಾರೆ. ತೆಲುಗು ಸಿನೆಮಾಗಳನ್ನು ತೆಲುಗು ಭಾಷೆಯಲ್ಲೇ ನೋಡುತ್ತಾರೆ. ಆದರೇ, ಮಿಕ್ಕ ಭಾಷಿಕರಿಗೆ ಅವರ ಭಾಷೆಯಲ್ಲಿ ಬಿಡುಗಡೆ ಮಾಡಿದರೆ ಮಾತ್ರ ಅರ್ಥ ಆಗುತ್ತದೆ ಎಂದು ಹೇಳಿದ್ದಾರೆ.
ಆದರೆ, ನಾನಿ ಮಾತುಗಳು ಸರಿಯಲ್ಲ ಎಂದು ಕನ್ನಡಿಗರು ಆಕ್ಷೇಪ ವ್ಯಕ್ತಪಡಿಸಿದ್ದಾರೆ. ನಾನಿಯವರೇ ನೀವು ತಪ್ಪು ತಿಳಿದಿದ್ದೀರಿ. ತುಂಬಾ ಕನ್ನಡಿಗರಿಗೆ ತೆಲುಗು, ತಮಿಳು ಭಾಷೆ ಬರಲ್ಲ. ಅವರಿಗೆ ತೆಲುಗು ಭಾಷೆ ಅರ್ಥ ಮಾಡಿಕೊಳ್ಳಲು ಆಗಲ್ಲ. ಅಂಥವರು ಕೂಡಾ ನಿಮ್ಮ ಸಿನೆಮಾ ನೋಡಬೇಕು ಎಂದು ಭಾವಿಸುವುದು ತಪ್ಪು. ಈ ಸಿನೆಮಾವನ್ನು ಕನ್ನಡಕ್ಕೆ ಡಬ್ ಮಾಡಲೇಬೇಕು ಎಂದು ನೆಟ್ಟಿಗರೊಬ್ಬರು ಟ್ವೀಟ್ ಮಾಡಿದರು.

ಇನ್ನು ಹಲವು ಮಂದಿ ನಾನಿ ಮಾತುಗಳಿಗೆ ಆಕ್ರೋಶ ಹೊರಹಾಕಿದ್ದಾರೆ.
ನೀವು ಬರೀ ಬೆಂಗಳೂರು ಭಾಗವನ್ನು ಇಡೀ ಕರ್ನಾಟಕ ಎಂದು ಭಾವಿಸಿದ್ದೀರಿ ಎಂದು ಕಾಣುತ್ತದೆ. ಬೆಂಗಳೂರು ಸುತ್ತ ಮುತ್ತ ಇರುವವರಿಗೆ ಮಾತ್ರ ತೆಲುಗು ಅರ್ಥವಾಗುತ್ತದೆ. ಉಳಿದ ಕಡೆ ತೆಲುಗು ಅರ್ಥ ಆಗಲ್ಲ ಎಂದಿದ್ದಾರೆ. ಮತ್ತೊಬ್ಬರು ಕಾಮೆಂಟ್ ಮಾಡಿ , ಹಿಂದಿ ಮಾದರಿಯಲ್ಲಿ ತೆಲುಗು ಹೇರಿಕೆ ಮಾಡಲು ಬರಬೇಡಿ ಎಂದು ಆಕ್ರೋಶ ಹೊರ ಹಾಕಿದ್ದಾರೆ.

ಈ ವಿಚಾರವಾಗಿ ಪ್ರತಿಕ್ರಿಯೆ ನೀಡಿದ ನಾನಿ, ಕನ್ನಡ ಡಬ್ಬಿಂಗ್ ಇಲ್ಲದ ಸಂದರ್ಭದಲ್ಲಿ ನನ್ನ ಅಥವಾ ಬೇರೆಯವರ ಸಿನೆಮಾಗಳನ್ನು, ಕನ್ನಡಿಗರು ಆದರಿಸಿದ ತುಂಬಾ ಸಂದರ್ಭಗಳು ಇವೆ. ಅದಕ್ಕೆ ನನ್ನ ಕೃತಜ್ಞತೆ. ಆದರೇ ಪ್ರೆಸ್ ಮೀಟ್ ನಲ್ಲಿ ನಾನು ಒಂದು ನಿರ್ದಿಷ್ಟ ಸಂದರ್ಭದಲ್ಲಿ ಆಡಿದ ಮಾತು ಉತ್ತರ ಎನಿಸಿಕೊಳ್ಳುತ್ತದೆ. ಆದರೇ, ಅದೇ ಸೋಶಿಯಲ್ ಮೀಡಿಯಾಗೆ ಬಂದಾಗ ಅದರ ಅರ್ಥವನ್ನು ಬದಲಾಯಿಸಲಾಗುತ್ತದೆ ಎಂದು ಟ್ವೀಟ್ ಮಾಡಿದ್ದಾರೆ.


ಕೂಡಲೇ ಮತ್ತೊಂದು ಟ್ವೀಟ್ ಮಾಡಿ, ನನ್ನ ಅಭಿಪ್ರಾಯವನ್ನು ಸರಿಯಾಗಿ ಹೇಳಲು ಆಗಿಲ್ಲ ಎಂದು ಭಾವಿಸಿದ್ದಲ್ಲಿ ಕ್ಷಮೆ ಇರಲಿ. ಗಡಿಗಳನ್ನು ದಾಟಿ ಕನ್ನಡ ಸಿನೆಮಾ ಸಾಧಿಸಿದ ಅದ್ಭುತ ವಿಜಯ ನಮಗೂ ಹೆಮ್ಮೆ ಅನಿಸುತ್ತಿದೆ ಎಂದು ಟ್ವೀಟ್ ಮಾಡಿದ್ದಾರೆ. ಈ ಮೂಲಕ KGF2 ಯಶಸ್ಸಿಗೆ ಸಂತಸ ವ್ಯಕ್ತಪಡಿಸಿದ್ದಾರೆ.