ರಾಜ್ಯದ ಕರಾವಳಿ ಭಾಗ ದಿನಕ್ಕೊಂದು ವಿವಾದಗಳಿಂದ ಸುದ್ದಿಯಾಗುತ್ತಲೇ ಇದೆ. ಕೋಮು ಧ್ವೇಷ, ಹಿಜಾಬ್ನಂತಹ ವಿಷಯಗಳ ನಂತರ ಇದೀಗ ಮಹಾತ್ಮ ಗಾಂಧಿ ಹಂತಕ ನಾಥೂರಾಮ್ ಗೋಡ್ಸೆ ಹೆಸರನ್ನು ರಸ್ತೆಗೆ ನಾಮಕರಣ ಮಾಡುವ ಮೂಲಕ ಮತತ್ಒಮ್ಮೆ ಸುದ್ದಿಯಾಗಿದೆ.
ಉಡುಪಿ ಜಿಲ್ಲೆಯ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಚಿವ ಸುನಿಲ್ಕುಮಾರ್ ಪ್ರತಿನಿಧಿಸುವ ಕಾರ್ಕಳ ಕ್ಷೇತ್ರದ ಬೋಳ ಗ್ರಾಮ ಪಂಚಾಯಿತಿಗೆ ಸೇರಿದ ರಸ್ತೆಯೊಂದಕ್ಕೆ ‘ರಾಷ್ಟ್ರಪಿತ ಮಹಾತ್ಮ ಗಾಂಧೀಜಿ’ಯವರನ್ನು ಹತ್ಯೆ ಮಾಡಿದ ‘ನಾಥೂರಾಮ್ ಗೋಡ್ಸೆ’ ಹೆಸರನ್ನು ಇಡಲಾಗಿದೆ.
‘ಬೋಳ ಗ್ರಾಮ ಪಂಚಾಯತ್- ಪಡುಗಿರಿ ನಾಥೂರಾಮ್ ಗೋಡ್ಸೆ ರಸ್ತೆ’ ಎಂದು ಬರೆಯಲಾಗಿರುವ ಮಾರ್ಗಸೂಚಿ ಫಲಕವನ್ನು ಹಾಕಲಾಗಿದೆ.
ಇದಕ್ಕೆ ಸಂಬಂಧಿಸಿದ ಫೋಟೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆದ ತಕ್ಷಣ ಜಿಲ್ಲಾಡಳಿತ ಎಚ್ಚೆತ್ತಿದೆ. ವಿವಾದಾಸ್ಪದವಾದ ಈ ಬೋರ್ಡನ್ನು ಕಾರ್ಕಳ ಪೊಲೀಸರು ಗ್ರಾಮ ಪಂಚಾಯತ್ ಅಧ್ಯಕ್ಷ ಹಾಗೂ ಸದಸ್ಯರ ಉಪಸ್ಥಿತಿಯಲ್ಲಿ ಫಲಕವನ್ನು ಕಿತ್ತು ಹಾಕಿದ್ದಾರೆ.
ಮಾಧ್ಯಮಗಳೊಂದಿಗೆ ಬೋಳ ಗ್ರಾಮ ಪಂಚಾಯತ್ ಅಧ್ಯಕ್ಷೆ ಸುಧಾ ಅವರು ಮಾತನಾಡಿ, ಈ ರಸ್ತೆಗೆ ಪಂಚಾಯತ್ನಿಂದ ಯಾವುದೇ ನಾಮಕರಣ ಮಾಡಿಲ್ಲ. ಯಾರೋ ಕಿಡಿಗೇಡಿಗಳು ಈ ಬೋರ್ಡ್ ಹಾಕಿದ್ದಾರೆ ಎಂದು ಹೇಳಿದ್ದಾರೆ.