ಹೊಸದಾಗಿ ಖರೀದಿಸಲಾಗುವ ದ್ವಿಚಕ್ರ ವಾಹನ ಮತ್ತು ಕಾರುಗಳ ಮೇಲೆ ಸುಂಕ ವಿಧಿಸುವುದಕ್ಕೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಸರ್ಕಾರ ತೀರ್ಮಾನಿಸಿದೆ.
ಹೊಸದಾಗಿ ಖರೀದಿಸಲಾಗುವ ದ್ವಿಚಕ್ರ ವಾಹನಗಳ ಮೇಲೆ ಹೆಚ್ಚುವರಿಯಾಗಿ 500 ರೂಪಾಯಿ ಸುಂಕ ವಿಧಿಸಲಾಗುತ್ತದೆ. ಹೊಸದಾಗಿ ಖರೀದಿಸಲಾಗುವ ಕಾರುಗಳ ಮೇಲೆ 1 ಸಾವಿರ ರೂಪಾಯಿ ಸುಂಕ ವಿಧಿಸಲಾಗುತ್ತದೆ. ಈ ವಾಹನಗಳ ನೋಂದಣಿ ಸಂದರ್ಭದಲ್ಲಿ ಈ ಉಪ ತೆರಿಗೆಯನ್ನು ವಿಧಿಸಲಾಗುತ್ತದೆ.
ಶೇಕಡಾ 3ರಷ್ಟು ಉಪ ತೆರಿಗೆ ವಿಧಿಸುವುದಕ್ಕೆ ಅವಕಾಶ ಕಲ್ಪಿಸುವ ಕರ್ನಾಟಕ ಮೋಟಾರು ವಾಹನ ತೆರಿಗೆ ತಿದ್ದುಪಡಿ ಮಸೂದೆಯನ್ನು ಸಂಸದೀಯ ವ್ಯವಹಾರಗಳ ಸಚಿವ ಹೆಚ್ ಕೆ ಪಾಟೀಲ್ ಅವರು ವಿಧಾನಸಭೆಯಲ್ಲಿ ಮಂಡಿಸಿದರು. ಮಸೂದೆಗೆ ಸದನ ಅಂಗೀಕಾರ ನೀಡಿದೆ.
ಈ ಉಪ ತೆರಿಗೆಯಿಂದ ಸಂಗ್ರಹವಾಗುವ ಮೊತ್ತವನ್ನು ಕರ್ನಾಟಕ ಮೋಟಾರು ಸಾರಿಗೆ ಮತ್ತು ಇತರೆ ಸಹವರ್ತಿ ಕಾರ್ಮಿಕರ ಸಾಮಾಜಿಕ ಭದ್ರತೆ ಮತ್ತು ಕಲ್ಯಾಣ ನಿಧಿಗಾಗಿ ಬಳಸಿಕೊಳ್ಳಲಾಗುತ್ತದೆ. ಈ ನಿಧಿಯನ್ನು ಬಸ್, ಕ್ಯಾಬ್ ಮತ್ತು ಆಟೋ ಡ್ರೈವರ್ಗಳ ಅನುಕೂಲಕ್ಕಾಗಿ ರಾಜ್ಯ ಸರ್ಕಾರ ಉಪಯೋಗಿಸಲಿದೆ.
ಕರ್ನಾಟಕ ಸರ್ಕಾರ ಸದ್ಯ ಮೋಟಾರು ವಾಹನಗಳ ಮೇಲೆ ಶೇಕಡಾ 11ರಷ್ಟು ತೆರಿಗೆಯನ್ನು ವಿಧಿಸುತ್ತಿದೆ. ಈ ತೆರಿಗೆಯಲ್ಲಿ ಶೇಕಡಾ 10ರಷ್ಟು ತೆರಿಗೆಯನ್ನು ಮೂಲಭೂತ ಸೌಕರ್ಯ ಅಭಿವೃದ್ಧಿಗೆ ಬಳಸಲಾಗುತ್ತದೆ. ಶೇಕಡಾ 1ರಷ್ಟು ತೆರಿಗೆ ಸಂಗ್ರಹದ ಮೊತ್ತವನ್ನು ನಗರ ಸಾರಿಗೆ ನಿಧಿಗಾಗಿ ಬಳಸಿಕೊಳ್ಳಲಾಗುತ್ತಿದೆ.
ADVERTISEMENT
ADVERTISEMENT