ರಾಷ್ಟ್ರ ರಾಜಕಾರಣ ದಿನಕ್ಕೊಂದು ತಿರುವು ಪಡೆಯುತ್ತಿದೆ. ದೇಶದಲ್ಲಿ ಧಾರ್ಮಿಕ ಅಸಹಿಷ್ಣುತೆ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ, ದೇಶ ರಾಜಕೀಯ ಪರಿಸ್ಥಿತಿಗಳ ಬಗ್ಗೆ ಚರ್ಚೆ ನಡೆಸಲು ಶೀಘ್ರವೇ ಬಿಜೆಪಿಯೇತರ ಮುಖ್ಯಮಂತ್ರಿಗಳು ಮುಂಬೈನಲ್ಲಿ ಸಭೆ ಸೇರಲಿದ್ದಾರೆ.
ಸಭೆಗೆ ಆಹ್ವಾನಿಸಿ ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ, ಬಿಜೆಪಿಯೇತರ ಮುಖ್ಯಮಂತ್ರಿಗಳಿಗೆ ಪತ್ರ ಬರೆದಿದ್ದಾರೆ. ಮಹಾರಾಷ್ಟ್ರ ಮುಖ್ಯಮಂತ್ರಿ ಉದ್ಧವ್ ಠಾಕ್ರೆ, ಎನ್ಸಿಪಿ ಅಧ್ಯಕ್ಷ ಶರದ್ ಪವಾರ್ ಜೊತೆ ಚರ್ಚಿಸಿ ಸ್ಥಳ ನಿಗದಿ ಬಳಿಕ ಮಮತಾ ಬ್ಯಾನರ್ಜಿ ಈ ಪತ್ರ ಬರೆದಿದ್ದಾರೆ.
ದೇಶದ ರಾಜಕೀಯ ಪರಿಸ್ಥಿತಿಗಳ ಜೊತೆಗೆ ಹೆಚ್ಚುತ್ತಿರುನ ಹಣದುಬ್ಬರ, ಕೋಮು ದ್ವೇಷ, ಕೇಂದ್ರ ತನಿಖಾ ಸಂಸ್ಥೆಗಳ ದುರುಪಯೋಗದಂತಹ ವಿಚಾರಗಳ ಬಗ್ಗೆ ಚರ್ಚೆ ನಡೆಯಲಿದೆ ಎಂದು ಶಿವಸೇನಾ ಸಂಸದ ಸಂಜಯ್ ರೌತ್ ತಿಳಿಸಿದ್ದಾರೆ.
1983ರಲ್ಲಿ ಇಂದಿರಾ ಗಾಂಧಿ ಪ್ರಧಾನಿಯಾಗಿದ್ದ ಸಂದರ್ಭದಲ್ಲಿ ಬೆಂಗಳೂರಿನಲ್ಲಿ ಆಗಿನ ಕರ್ನಾಟಕ ಮುಖ್ಯಮಂತ್ರಿ ರಾಮಕೃಷ್ಣ ಹೆಗಡೆ ನೇತೃತ್ವದಲ್ಲಿ ನಾಲ್ವರು ಮುಖ್ಯಮಂತ್ರಿಗಳು ಸಭೆ ಸೇರಿದ್ದು, ಆಗ ಬಹುದೊಡ್ಡ ಚರ್ಚೆಗೆ ನಾಂದಿ ಹಾಡಿತ್ತು. ಇದು ಇಂದಿರಾ ಗಾಂಧಿ ಕೆಂಗಣ್ಣಿಗೆ ಗುರಿ ಆಗಿತ್ತು. ಇಂದಿರಾಗಾಂಧಿ ಆಪ್ತ ನಾಯಕರು, ಈ ಸಭೆ ವಿರುದ್ಧ ತೀವ್ರ ಆಕ್ರೋಶ ಹೊರಹಾಕಿದ್ದರು.