ಎರಡು ತಿಂಗಳ ಹಿಂದೆಯಷ್ಟೇ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಉದ್ಘಾಟಿಸಿದ್ದ ಹೊಚ್ಚ ಹೊಸ ಅಟಲ್ ಬಿಹಾರಿ ವಾಜಪೇಯಿ ಕ್ರೀಡಾಂಗಣದ 4 ಕೋಟಿ ರೂಪಾಯಿ ವೆಚ್ಚದಲ್ಲಿ ನಿರ್ಮಿಸಿದ್ದ ಉಕ್ಕಿನ ಗ್ಯಾಲರಿ ಬಿರುಗಾಳಿ ಮಳೆಗೆ ಬುಡಸಮೇತ ನೆಲಸಮ ಆಗಿದೆ.
ಬಿಜೆಪಿ ಸರ್ಕಾರದ ವಿರುದ್ಧ ಶೇಕಡಾ 40ರಷ್ಟು ಕಮಿಷನ್ ಆರೋಪ ಮತ್ತು ಆಂಧ್ರ ಗುತ್ತಿಗೆದಾರರಿಗೆ ಕಾಮಗಾರಿಗಳನ್ನು ಹಂಚಿಕೆ ಮಾಡಲಾಗುತ್ತಿದೆ ಎಂಬ ಆರೋಪಗಳ ನಡುವೆ ಸ್ವತಃ ಮುಖ್ಯಮಂತ್ರಿಗಳೇ ಉದ್ಘಾಟಿಸಿದ್ದ ಕ್ರೀಡಾಂಗಣದ ಗ್ಯಾಲರಿ 2 ತಿಂಗಳಲ್ಲೇ ಬುಡಸಮೇತ ಕುಸಿದು ಬಿದ್ದಿರುವುದು ಕಾಮಗಾರಿಯ ಗುಣಮಟ್ಟದ ಬಗ್ಗೆ ಪ್ರಶ್ನೆ ಉಂಟು ಮಾಡಿದೆ.
ಮಾರ್ಚ್ 1ರಂದು 50 ಕೋಟಿ ರೂಪಾಯಿ ವೆಚ್ಚದ ವಾಜಪೇಯಿ ಕ್ರೀಡಾಂಗಣ ಉದ್ಘಾಟಿಸಿದ್ದ ಸಿಎಂ ಬೊಮ್ಮಾಯಿ. ಈ ವೇಳೆ ಕಂದಾಯ ಸಚಿವ ಅಶೋಕ್ ಕೂಡಾ ಇದ್ದರು. ಈ ಹೊಸ ಕ್ರೀಡಾಂಗಣದ ಗ್ಯಾಲರಿ ಈಗ ಒಂದೇ ಒಂದು ಮಳೆಗೆ ನೆಲಸಮ ಆಗಿದೆ.
ಬೆಂಗಳೂರು ನಗರ ವ್ಯಾಪ್ತಿಯ ಬಿಜೆಪಿ ಶಾಸಕ ಸತೀಶ್ ರೆಡ್ಡಿ ಪ್ರತಿನಿಧಿಸುವ ಬೊಮ್ಮನಹಳ್ಳಿ ವಿಧಾನಸಭಾ ಕ್ಷೇತ್ರದ ಹೆಚ್ಎಸ್ಆರ್ ಲೇಔಟ್ನಲ್ಲಿ ಕ್ರೀಡಾಂಗಣವನ್ನೂ ಎರಡು ತಿಂಗಳ ಹಿಂದೆಯಷ್ಟೇ 50 ಕೋಟಿ ರೂಪಾಯಿ ವೆಚ್ಚದಲ್ಲಿ ನಿರ್ಮಿಸಲಾಗಿತ್ತು. ವಿಚಿತ್ರ ಅಂದ್ರೆ ಕಾಮಗಾರಿಯ ಗುತ್ತಿಗೆಯನ್ನು ಆಂಧ್ರ ಮೂಲದ ಗುತ್ತಿಗೆದಾರ ಶಶಿಕುಮಾರ್ ಎಂಬವರಿಗೆ ನೀಡಲಾಗಿತ್ತು.