ADVERTISEMENT
ಮುಂದಿನ ವರ್ಷ ನಡೆಯಲಿರುವ ಲೋಕಸಭಾ ಚುನಾವಣೆಯಲ್ಲಿ ಹಾಸನ ಸಂಸದ ಮತ್ತು ಹೆಚ್ಡಿ ರೇವಣ್ಣ-ಭವಾನಿ ರೇವಣ್ಣ ಪುತ್ರ ಪ್ರಜ್ವಲ್ ರೇವಣ್ಣಗೆ ಟಿಕೆಟ್ ಸಿಗುವುದು ಅನುಮಾನ.
ಪ್ರಜ್ವಲ್ ರೇವಣ್ಣಗೆ ಲೋಕಸಭಾ ಚುನಾವಣೆ ಟಿಕೆಟ್ ನೀಡುವುದು ಬೇಡ ಎಂಬ ಆಲೋಚನೆಯಲ್ಲಿದ್ದಾರೆ ಮಾಜಿ ಮುಖ್ಯಮಂತ್ರಿ ಹೆಚ್ ಡಿ ಕುಮಾರಸ್ವಾಮಿ.
ವಿಧಾನಸಭಾ ಚುನಾವಣೆಯಲ್ಲಿ ತಮ್ಮ ಪುತ್ರ ನಿಖಿಲ್ ಕುಮಾರಸ್ವಾಮಿ ಅವರು ರಾಮನಗರ ಕ್ಷೇತ್ರದಲ್ಲಿ ಹೀನಾಯವಾಗಿ ಸೋತ ಹಿನ್ನೆಲೆಯಲ್ಲಿ ಪ್ರಜ್ವಲ್ ರೇವಣ್ಣಗೆ ಟಿಕೆಟ್ ನಿರಾಕರಿಸುವ ಬಗ್ಗೆ ಕುಮಾರಸ್ವಾಮಿ ಆಲೋಚನೆ ಮಾಡಿದ್ದಾರೆ.
ಸದ್ಯ ಕುಮಾರಸ್ವಾಮಿ ಕುಟುಂಬದಿಂದ ಕುಮಾರಸ್ವಾಮಿ ಅವರೊಬ್ಬರೇ ಶಾಸಕರಾಗಿದ್ದಾರೆ. ಮಂಡ್ಯ ಲೋಕಸಭಾ ಕ್ಷೇತ್ರದಲ್ಲಿ ಸೋತ ಮಗನನ್ನು ಅನಿತಾ ಕುಮಾರಸ್ವಾಮಿ ಅವರು ಬಿಟ್ಟುಕೊಟ್ಟಿದ್ದ ರಾಮನಗರದಿಂದ ಗೆಲ್ಲಿಸಿಕೊಂಡು ಬರುವ ಪ್ರಯತ್ನ ಸಫಲವಾಗಿಲ್ಲ.
ಇತ್ತ ರೇವಣ್ಣ ಅವರ ಕುಟುಂಬದಿಂದ ಹೆಚ್ ಡಿ ರೇವಣ್ಣ ಅವರು ಶಾಸಕರು, ಪ್ರಜ್ವಲ್ ರೇವಣ್ಣ ಸಂಸದರು, ಸೂರಜ್ ರೇವಣ್ಣ ವಿಧಾನಪರಿಷತ್ ಸದಸ್ಯರು ಮತ್ತು ಭವಾನಿ ರೇವಣ್ಣ ಅವರು ಹಾಸನ ಜಿಲ್ಲಾ ಪಂಚಾಯತ್ ಸದಸ್ಯರು.
ಈ ಹಿನ್ನೆಲೆಯಲ್ಲಿ ನಿಖಿಲ್ ಸೋಲಿನ ಆಘಾತದಲ್ಲಿರುವ ಕುಮಾರಸ್ವಾಮಿ ಅವರು ಕುಟುಂಬ ರಾಜಕಾರಣ ಬೇಡ ಎಂಬ ಕಾರಣ ಮುಂದಿಟ್ಟುಕೊಂಡು ಪ್ರಜ್ವಲ್ಗೆ ಟಿಕೆಟ್ ನಿರಾಕರಿಸುವ ಬಗ್ಗೆ ಆಪ್ತರ ಜೊತೆಗೆ ಸಮಾಲೋಚನೆ ನಡೆಸಿದ್ದಾರೆ ಎನ್ನುವ ಮಾಹಿತಿ ಲಭ್ಯವಾಗಿದೆ.
ಹಾಸನ ವಿಧಾನಸಭಾ ಕ್ಷೇತ್ರದಲ್ಲಿ ಭವಾನಿ ರೇವಣ್ಣ ಅವರಿಗೆ ಟಿಕೆಟ್ ತಪ್ಪಿಸಿ ಹೆಚ್ ಸಿ ಸ್ವರೂಪ್ ಅವರಿಗೆ ಹೆಚ್ಡಿಕೆ ಟಿಕೆಟ್ ಕೊಡಿಸಿದ್ದರು, ಸ್ವರೂಪ್ ಗೆದ್ದು ಶಾಸಕರಾದರು.
ADVERTISEMENT