ಮೂರು ತಿಂಗಳಿಂದ ಮಣಿಪುರದಲ್ಲಾಗುತ್ತಿರುವ ಜನಾಂಗೀಯ ಹಿಂಸಾಚಾರದ ಬಗ್ಗೆ ಲೋಕಸಭೆ ಮತ್ತು ರಾಜ್ಯಸಭೆಯಲ್ಲಿ ಹೇಳಿಕೆ ನೀಡಲು ಹಿಂದೇಟು ಹಾಕುತ್ತಿರುವ ಪ್ರಧಾನಿ ನರೇಂದ್ರ ಮೋದಿ ಸರ್ಕಾರದ ವಿರುದ್ಧ ವಿಪಕ್ಷಗಳು ಅವಿಶ್ವಾಸ ನಿರ್ಣಯ ಅಸ್ತ್ರ ಪ್ರಯೋಗಿಸಿವೆ.
ಎನ್ಡಿಎ ಸರ್ಕಾರದ ವಿರುದ್ಧ ಅವಿಶ್ವಾಸ ನಿರ್ಣಯ ಗೊತ್ತುವಳಿ ಮಂಡಿಸುವ ಸಂಬಂಧ ಲೋಕಸಭೆ ಸ್ಪೀಕರ್ ಓಂ ಬಿರ್ಲಾ ಅವರಿಗೆ ಕಾಂಗ್ರೆಸ್ ಸಂಸದ ತರುಣ್ ಗೊಗೋಯ್ ನಿಲುವಳಿ ಸೂಚನೆಯ ಪತ್ರ ನೀಡಿದ್ದಾರೆ.
ಲೋಕಸಭೆಯಲ್ಲಿ ತನ್ನ ಎಲ್ಲ ಸಂಸದರು ಹಾಜರಿರುವಂತೆ ಕಾಂಗ್ರೆಸ್ ವಿಪ್ ಜಾರಿ ಮಾಡಿದೆ.
ಅವಿಶ್ವಾಸ ನಿರ್ಣಯ ಸಂಬಂಧ ಲೋಕಸಭೆಯಲ್ಲಿ ಇವತ್ತೇ ಚರ್ಚೆಗೆ ಅವಕಾಶ ನೀಡುವಂತೆ ಸ್ಪೀಕರ್ ಅವರಿಗೆ ಕಾಂಗ್ರೆಸ್ ನಿಲುವಳಿ ಪತ್ರ ನೀಡಿದೆ.
ಲೋಕಸಭೆಯಲ್ಲಿ ಬಿಜೆಪಿ ನೇತೃತ್ವದ ಎನ್ಡಿಎ ಮೈತ್ರಿಕೂಟಕ್ಕೆ ಪ್ರಚಂಡ ಬಹುಮತವಿದ್ದು, ಕಾಂಗ್ರೆಸ್ ಪ್ರಸ್ತಾಪಿಸಿರುವ ಅವಿಶ್ವಾಸ ನಿರ್ಣಯಕ್ಕೆ ಸೋಲಾಗುವುದು ಖಚಿತ.
ಆದರೆ ಅವಿಶ್ವಾಸ ನಿರ್ಣಯ ನಿಲುವಳಿಗೆ ಸ್ಪೀಕರ್ ಒಪ್ಪಿಗೆ ಕೊಟ್ಟರೆ ಆ ನಿರ್ಣಯದ ಮೇಲೆ ವಿರೋಧ ಪಕ್ಷಗಳಿಗೆ ಸದನದಲ್ಲಿ ಚರ್ಚೆಗೆ ಅವಕಾಶ ಸಿಗಲಿದೆ ಮತ್ತು ನಿರ್ಣಯದ ಮೇಲೆ ಲೋಕಸಭೆಯಲ್ಲಿ ಸಭಾ ನಾಯಕರಾಗಿರುವ ಪ್ರಧಾನ ಮಂತ್ರಿಗಳೇ ಉತ್ತರಿಸಬೇಕಾಗುತ್ತದೆ.
ಅವಿಶ್ವಾಸ ನಿರ್ಣಯ ಚರ್ಚೆ ಮೂಲಕ ಮಣಿಪುರದಲ್ಲಿ ಜನಾಂಗೀಯ ಹಿಂಸಾಚಾರ, ಭಾರತ-ಚೀನಾ ಗಡಿ ಸಂಘರ್ಷ, ಬೆಲೆ ಏರಿಕೆ ಒಳಗೊಂಡಂತೆ ಹಲವು ವಿಷಯಗಳ ಬಗ್ಗೆ ವಿರೋಧ ಪಕ್ಷದ ಸಂಸದರು ಸರ್ಕಾರವನ್ನು ಲೋಕಸಭೆಯಲ್ಲಿ ನೇರವಾಗಿ ಪ್ರಶ್ನೆ ಮಾಡಲು ಅವಕಾಶ ಸಿಗಲಿದೆ ಎನ್ನುವುದು ಕಾಂಗ್ರೆಸ್ ಲೆಕ್ಕಾಚಾರ.
ಬೆಂಗಳೂರಲ್ಲಿ ಜುಲೈ 18ರಂದು INDIA ಮೈತ್ರಿಕೂಟ ಹೊರಹೊಮ್ಮಿದ ಬಳಿಕ ಲೋಕಸಭೆಯಲ್ಲಿ 26 ವಿಪಕ್ಷಗಳ ಒಗ್ಗಟ್ಟು ಪ್ರದರ್ಶನಕ್ಕೂ ಅವಿಶ್ವಾಸ ನಿರ್ಣಯ ವೇದಿಕೆಯಾಗಲಿದೆ.
ADVERTISEMENT
ADVERTISEMENT