ಏಪ್ರಿಲ್ 1 ರ ನಂತರ ಮೂರರಿಂದ ನಾಲ್ಕು ತಂಡಗಳಲ್ಲಿ ರಾಜ್ಯ ಪ್ರವಾಸ ಮಾಡಲಾಗುವುದು. ಸದ್ಯಕ್ಕೆ ಅವಧಿಗೂ ಮುಂಚಿತವಾಗಿ ರಾಜ್ಯ ವಿಧಾನಸಭೆಗೆ ಚುನಾವಣೆ ನಡೆಯುವ ಲಕ್ಷಣಗಳು ಇಲ್ಲ ಎಂದು ಬಿ.ಎಸ್.ಯಡಿಯೂರಪ್ಪ ತಿಳಿಸಿದರು.
ಅಮಿತ್ ಶಾ ಅವರು ರಾಜ್ಯಕ್ಕೆ ಬಂದ ನಂತರ ಅವಧಿಪೂರ್ವ ಚುನಾವಣೆ ಘೋಷಣೆಯಾಗುತ್ತದೆ ಎಂಬ ಕುರಿತು ಗೊತ್ತಿಲ್ಲ. ಒಂದು ವೇಳೆ ಆ ತರಹದ ಬೆಳವಣಿಗೆಗಳು ಇದ್ದಲ್ಲಿ ನಂತರ ತಿಳಿಸುವೆ ಎಂದು ಇಲ್ಲಿ ಅವರು ಸುತ್ತೂರು ಮಠದಲ್ಲಿ ಬುಧವಾರ ಸುದ್ದಿಗಾರರ ಪ್ರಶ್ನೆಗೆ ಪ್ರತಿಕ್ರಿಯಿಸಿದರು.
ನಾನು ರಾಜ್ಯದ ಜನತೆಗೆ ನೀಡಿದ್ದ ಭರವಸೆಗಳನ್ನು ಬಸವರಾಜ ಬೊಮ್ಮಾಯಿ ಈಡೇರಿಸಿದ್ದಾರೆ. ಅವರ ನಾಯಕತ್ವದಲ್ಲೇ ಮುಂಬರುವ ಚುನಾವಣೆ ನಡೆಯುತ್ತದೆ. 140 ಸ್ಥಾನ ಗೆಲ್ಲುವುದು ನಿಶ್ಚಿತ. ಮುಖ್ಯಮಂತ್ರಿ ಬದಲಾವಣೆ ಎಂಬುದು ಕೇವಲ ಊಹಾಪೋಹವಷ್ಟೆ ಎಂದರು.
ಬಿ.ವೈ. ವಿಜಯೇಂದ್ರ ಸಂಪುಟ ಸೇರ್ಪಡೆ ಬಗ್ಗೆ ನಾನು ಯಾರ ಜೊತೆಯೂ ಚರ್ಚೆ ಮಾಡಿಲ್ಲ ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.
ಕೊಳ್ಳೇಗಾಲ ಶಾಸಕ ಎನ್.ಮಹೇಶ್ ಅವರ ಕ್ಷೇತ್ರದಲ್ಲಿ ನಡೆಯಲಿರುವ ಕಾರ್ಯಕ್ರಮಗಳಲ್ಲಿ ಭಾಗವಹಿಸುವೆ. ಪರಿಶಿಷ್ಟಜಾತಿ, ಪರಿಶಿಷ್ಟ ಪಂಗಡ ಹಾಗೂ ಅಲ್ಪಸಂಖ್ಯಾತರು ಬಿಜೆಪಿ ಪರವಾಗಿಯೇ ಇದ್ದಾರೆ. ಮುಂದೆಯೂ ಅವರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಹೋಗುತ್ತೇವೆ ಎಂದರು. ಇದಕ್ಕೂ ಮುನ್ನ ಅವರು ಸುತ್ತೂರು ಮಠದ ಶಿವರಾತ್ರಿದೇಶಿಕೇಂದ್ರ ಸ್ವಾಮೀಜಿ ಅವರನ್ನು ಭೇಟಿ ಮಾಡಿ ಮಾತುಕತೆ ನಡೆಸಿದರು.