ರಾಜ್ಯಸರ್ಕಾರದ ಯಾವುದೇ ಇಲಾಖೆಗಳ ಕಛೇರಿಯ ಸಮಯದಲ್ಲಿ ಸಾರ್ವಜನಿಕರು ವಿಡಿಯೋ ಅಥವಾ ಫೋಟೋ ತೆಗೆಯುವುದನ್ನು ನಿಷೇಧಿಸಿ ರಾಜ್ಯ ಸರ್ಕಾರ ಆದೇಶ ಹೊರಡಿಸಿದೆ.
ರಾಜ್ಯಾದ್ಯಂತ ಎಲ್ಲಾ ತಾಲ್ಲೂಕು, ಜಿಲ್ಲೆ ಹಾಗೂ ರಾಜ್ಯ ಮಟ್ಟದಲ್ಲಿ ವಿವಿಧ ಇಲಾಖೆಗಳ ಸರ್ಕಾರಿ ಕಚೇರಿಗಳು ಕಾರ್ಯನಿರ್ವಹಿಸುತ್ತಿವೆ. ವಿವಿಧ ಕೆಲಸಗಳಿಗಾಗಿ ಸರ್ಕಾರಿ ಕಚೇರಿಗಳಿಗೆ ಸಾರ್ವಜನಿಕರು ಆಗಮಿಸುವುದು ಸಾಮಾನ್ಯ. ಕೆಲ ಖಾಸಗಿ ವ್ಯಕ್ತಿಗಳು ಸರ್ಕಾರಿ ಕಚೇರಿಗಳಿಗೆ ಕೆಲಸದ ವೇಳೆ ಬಂದು ವಿಡಿಯೋ ಮಾಡಿ, ಫೋಟೋ ತೆಗೆದು ಸಾಮಾಜಿಕ ಮಾಧ್ಯಮಗಳಲ್ಲಿ ಹರಿಬಿಟ್ಟು, ದುರ್ಬಳಕೆ ಮಾಡಿಕೊಳ್ಳುತ್ತಾರೆ.
ಇದರಿಂದಾಗಿ ಸರ್ಕಾರಿ ಅಧಿಕಾರಿಗಳ ಘನತೆಗೆ ಕುಂದುಂಟಾಗುತ್ತದೆ. ವಿಶೇಷವಾಗಿ ಮಹಿಳಾ ಅಧಿಕಾರಿಗಳಿಗೆ ಸಮಸ್ಯೆಯುಂಟಾಗುತ್ತಿದೆ. ಆದ್ದರಿಂದ ರಾಜ್ಯ ಸರ್ಕಾರಿ ಕಚೇರಿಗಳ ಕೆಲಸದ ವೇಳೆಯಲ್ಲಿ ಸಾರ್ವಜನಿಕರು ಅನಧಿಕೃತವಾಗಿ ಪೋಟೋ ಅಥವಾ ವಿಡಿಯೋ ಮಾಡದಂತೆ ನಿಷೇಧಿಸಿ ಸರ್ಕಾರ ಆದೇಶ ಹೊರಡಿಸಿದೆ.
ಅನುಮತಿ ಇಲ್ಲದೆ ಇಲಾಖೆಗಳ ಕಚೇರಿ ವೇಳೆಯಲ್ಲಿ ಖಾಸಗಿ ವ್ಯಕ್ತಿಗಳು ಫೋಟೋ/ವಿಡಿಯೋ ಮಾಡದಂತೆ ತಡೆಯುವ ಸಲುವಾಗಿ ರಾಜ್ಯ ನೌಕರರ ಸಂಘದ ರಾಜ್ಯಾಧ್ಯಕ್ಷರು ಈ ಹಿಂದೆ ಸರ್ಕಾರಕ್ಕೆ ಮನವಿ ಸಲ್ಲಿಸಿದ್ದರು.