ದಕ್ಷಿಣ ಕನ್ನಡ ಜಿಲ್ಲೆಯ ಪ್ರಸಿದ್ಧ ದೇವಸ್ಥಾನದಲ್ಲಿ ಅನ್ಯಮತೀಯರಿಗೆ ಜಾತ್ರೆಯಲ್ಲಿ ವ್ಯಾಪಾರಕ್ಕೆ ಅವಕಾಶ ನೀಡದಂತೆ ಸನಾತನ ಹಿಂದೂ ಜಾತ್ರಾ ವ್ಯಾಪಾರಸ್ಥರ ಸಂಘವು ದೇವಸ್ಥಾನದ ಆಡಳಿತ ಮಂಡಳಿಗೆ ಆಗ್ರಹಿಸಿದೆ.
ಮುಲ್ಕಿಯಲ್ಲಿ ನಡೆಯಲಿರುವ ಶ್ರೀ ಬಪ್ಪನಾಡು ದುರ್ಗಾಪರಮೇಶ್ವರಿ ದೇವಸ್ಥಾನದ ಜಾತ್ರೆಯಲ್ಲಿ ಅನ್ಯಮತೀಯರಿಗೆ ವ್ಯಾಪಾರಕ್ಕೆ ಅವಕಾಶ ನೀಡಬಾರದೆಂದು ಆಗ್ರಹಿಸಲಾಗಿದೆ. ಹಿಂದೂ ಜಾತ್ರಾ ವ್ಯಾಪಾರಸ್ಥರ ಸಂಘದ ಜಯರಾಮ್ ಶೆಟ್ಟಿಗಾರ್ ಎಂಬುವವರು ದೇವಸ್ಥಾನದ 150 ಮೀ ವ್ಯಾಪ್ತಿಯೊಳಗೆ ಅನ್ಯಮತೀಯ ವ್ಯಾಪಾರಸ್ಥರಿಗೆ ಅವಕಾಶ ನೀಡಬಾರದು ಹಾಗೂ ದೇವಸ್ಥಾನದ ವಠಾರದಲ್ಲಿ ಹಿಂದುಗಳೇ ವ್ಯಾಪಾರ ಮಾಡಬೇಕು ಎಂದು ಮನವಿ ಮಾಡಿದ್ದಾರೆ.
ಬಪ್ಪ ಬ್ಯಾರಿ ಎಂಬ ಕೇರಳ ವ್ಯಾಪಾರಿಯು ದೇವಸ್ಥಾನವನ್ನು ಕಟ್ಟಿದರು ಎಂದು ಹೇಳಲಾಗುತ್ತೆ. ಇದು ದೇವಿಯ ಮಹಿಮೆಯನ್ನು ತಿಳಿಸುತ್ತದೆ. ಮುಲ್ಕಿ ನದಿಯ ಪ್ರವಾಹದಲ್ಲಿ ದೇವಸ್ಥಾನವು ನಶಿಸಿತು. ಆದರೆ 5 ಲಿಂಗಗಳ ಪೀಠಕ್ಕೆ ಯಾವುದೇ ಹಾನಿಯಾಗಿರಲಿಲ್ಲ. ಒಂದು ದಿನ ಬಪ್ಪ ಬ್ಯಾರಿ ಹಡಗು ಆ ಲಿಂಗಗಳಿಗೆ ಡಿಕ್ಕಿ ಹೊಡೆಯಿತು. ಆಗ ಅವನಿಗೆ ದುರ್ಗಾದೇವಿಯು ಕನಸಿನಲ್ಲಿ ಬಂದು ಆ ಲಿಂಗಗಳಿಗೆ ದೇವಸ್ಥಾನವನ್ನು ಕಟ್ಟಲು ಹೇಳಿದಂತಾಯಿತು. ಆದ್ದರಿಂದ ಈ ಸ್ಥಳವನ್ನು ಬಪ್ಪ ಎಂದು ಕರೆಯುತ್ತಾರೆ.
ಇಲ್ಲಿ ನಡೆಯುವ ಜಾತ್ರೆಗೆ ಮತ, ಧರ್ಮ ಮೀರಿ ಎಲ್ಲರೂ ಭಾಗವಹಿಸುತ್ತಾರೆ. ಆದರೆ ಕಳೆದ 2-3 ವರ್ಷಗಳಿಂದ ಇಲ್ಲಿ ಧರ್ಮ ದಂಗಲ್ ನಡೆಯುತ್ತಿದೆ. ಇದೀಗ ಅನ್ಯ ಧರ್ಮೀಯರಿಗೆ ವ್ಯಾಪಾರಕ್ಕೆ ಅವಕಾಶ ನೀಡದಂತೆ ಆಗ್ರಹಿಸಲಾಗುತ್ತಿದೆ.