ಹಿಂದೂಗಳಲ್ಲದವರು ಹಿಂದೂಗಳ ದೇವಸ್ಥಾನದೊಳಗೆ ಪ್ರವೇಶಿಸುವಂತಿಲ್ಲ ಎಂದು ಮದ್ರಾಸ್ ಹೈಕೋರ್ಟ್ ಮಹತ್ವದ ಆದೇಶ ನೀಡಿದೆ.
ಹಿಂದೂಗಳಲ್ಲದವರು ದೇವಸ್ಥಾನಗಳಲ್ಲಿರುವ ಧ್ವಜಸ್ತಂಭವನ್ನು ದಾಟಿ ಹೋಗುವಂತಿಲ್ಲ. ಈ ಸಂಬಂಧ ಸೂಕ್ತ ಫಲಕಗಳನ್ನು ದೇವಸ್ಥಾನಗಳಲ್ಲಿ ಹಾಕುವಂತೆ ತಮಿಳುನಾಡು ಸರ್ಕಾರಕ್ಕೆ ಮದ್ರಾಸ್ ಹೈಕೋರ್ಟ್ ನ್ಯಾಯಮೂರ್ತಿ ಎಸ್ ಶ್ರೀಮತಿ ಅವರಿದ್ದ ಏಕಸದಸ್ಯ ನ್ಯಾಯಪೀಠ ಆದೇಶಿಸಿದೆ.
ಪಳನಿ ದೇವಸ್ಥಾನದಲ್ಲಿ ಹಿಂದೂಗಳಲ್ಲದವರಿಗೆ ನಿರ್ಬಂಧ ಹೇರಿ ವಿಧಿಸಲಾಗಿದ್ದ ಫಲಕವನ್ನು ಅಧಿಕಾರಿಗಳು ತೆರವು ಮಾಡಿದ್ದರು. ಅಧಿಕಾರಿಗಳ ಕ್ರಮ ಪ್ರಶ್ನಿಸಿ ಸೆಂಥಿಲ್ ಕುಮಾರ್ ಎಂಬವರು ಹೈಕೋರ್ಟ್ಗೆ ದಾವೆ ಹೂಡಿದ್ದರು.
ದೇವಸ್ಥಾನಗಳನ್ನು ಜನರು ಪ್ರವಾಸಿತಾಣವಾಗಿ ಮಾಡಿಕೊಳ್ಳಲು ಸಾಧ್ಯವಿಲ್ಲ. ಆಗಮಗಳಲ್ಲಿ ಹೇಳಿದಂತೆ ದೇವಸ್ಥಾನಗಳ ಆವರಣಗಳಲ್ಲಿ ನಡೆದುಕೊಳ್ಳಬೇಕು. ಹೀಗಾಗಿ ಒಂದು ವೇಳೆ ಹಿಂದೂ ಧರ್ಮದ ಮೇಲೆ ನಂಬಿಕೆ ಇಲ್ಲದ ಇತರೆ ಧರ್ಮಿಯರಿಗೆ ಪ್ರವೇಶಿಸಲು ಅವಕಾಶವಿಲ್ಲ.
ಆಗಮಗಳು ಮತ್ತು ಶಾಸ್ತ್ರಗಳಲ್ಲಿ ಹೇಳಿದನ್ನು ಸರ್ಕಾರ ದೇವಸ್ಥಾನಗಳಲ್ಲಿ ಕಡ್ಡಾಯವಾಗಿ ಪಾಲನೆ ಮಾಡಬೇಕು.
ಒಂದು ವೇಳೆ ಹಿಂದೂಗಳಲ್ಲದ ಬೇರೆ ಧರ್ಮದವರು ದೇವಸ್ಥಾನದಲ್ಲಿ ದೇವರ ದರ್ಶನಕ್ಕೆ ಬಂದರೆ ಆಗ ಅಂತಹ ಭಕ್ತರು ತಮಗೆ ಆ ದೇವರಲ್ಲಿ ನಂಬಿಕೆ ಇದೆ ಎಂದೂ, ಹಿಂದೂ ಧರ್ಮದ ಪದ್ಧತಿಗಳನ್ನು ಪಾಲನೆ ಮಾಡುತ್ತೇನೆಂದೂ ಮತ್ತು ದೇವಸ್ಥಾನಗಳ ನಿಯಮಗಳಿಗೆ ಬದ್ಧನಾಗಿರುತ್ತೇನೆಂದು ಮುಚ್ಚಳಿಕೆ ಬರೆದುಕೊಡಬೇಕು
ಎಂದು ಹೈಕೋರ್ಟ್ ಆದೇಶಿಸಿದೆ.
ಈ ಆದೇಶ ತಮಿಳುನಾಡು ಸರ್ಕಾರದ ಮುಜರಾಯಿ ಇಲಾಖೆಯ ಎಲ್ಲ ದೇವಸ್ಥಾನಗಳಿಗೂ ಅನ್ವಯ ಆಗುತ್ತದೆ ಎಂದು ಹೈಕೋರ್ಟ್ ಆದೇಶದಲ್ಲಿ ಹೇಳಿದೆ.