ಐಟಿ ದಾಳಿ ವೇಳೆ ಸಿಕ್ಕ 350 ಕೋಟಿ ರೂಪಾಯಿ ಕುರಿತಾಗಿ ಮೊದಲ ಬಾರಿಗೆ ಖುದ್ದು ಜಾರ್ಖಂಡ್ ಸಂಸದ ಧೀರಜ್ ಸಾಹು ಮೌನ ಮುರಿದಿದ್ದಾರೆ.
ದಾಳಿ ವೇಳೆ ಸಿಕ್ಕಿರುವ ಎಲ್ಲಾ ಹಣವೂ ತಮ್ಮ ಕುಟುಂಬಸ್ಥರು ನಡೆಸುತ್ತಿರುವ ವ್ಯವಹಾರ ಮತ್ತು ತಮ್ಮ ಸಂಸ್ಥೆಯದ್ದು ಅಂತ ಹೇಳಿದ್ದಾರೆ. ಇನ್ನು ಈ ಹಣ ಯಾವುದೇ ರೀತಿಯಲ್ಲಿ ಕಾಂಗ್ರೆಸ್ ಪಕ್ಷಕ್ಕೆ ಸೇರಿದ್ದಲ್ಲ ಅಂತ ಸಂಸದ ಸಾಹು ಸ್ಪಷ್ಟನೆ ನೀಡಿದ್ದಾರೆ.
ಕಳೆದ 10 ದಿನಗಳ ಹಿಂದೆ ಸಾಹು ನಿವಾಸ ಮತ್ತು ಒಡಿಶಾದ ಅವರ ಕಂಪನಿಯ ಮೇಲೆ ದಾಳಿ ನಡೆಸಿದ ಐಟಿ ಅಧಿಕಾರಿಗಳಿಗೆ ಬರೋಬ್ಬರಿ 350 ಕೋಟಿ ರೂಪಾಯಿ ನಗದು ಪತ್ತೆಯಾಗಿತ್ತು. ಈ ಹಣವನ್ನು ಲೆಕ್ಕ ಮಾಡುವಷ್ಟರಲ್ಲಿ ಐಟಿ ಅಧಿಕಾರಿಗಳು ಹೈರಾಣಾಗಿಹೋದ್ರು. ಇನ್ನು ಈ ದಾಳಿ ಇಡೀ ದೇಶದಲ್ಲೇ ಮೊಟ್ಟ ಮೊದಲ ಬಾರಿಗೆ ಐಟಿ ಅಧಿಕಾರಿಗಳು ಇಷ್ಟು ಭಾರೀ ಮೊತ್ತದ ಹಣ ಜಪ್ತಿ ಮಾಡಿರುವ ದಾಖಲೆ ಸೃಷ್ಟಿಸಿದೆ.
ಇನ್ನು ತಾವು 35 ವರ್ಷಗಳಿಂದಲೂ ರಾಜಕೀಯದಲ್ಲಿದ್ದು, ತಮ್ಮ ಕುಟುಂಬ ಸುಮಾರು 100 ವರ್ಷಗಳಿಂದ ಮದ್ಯದ ವಹಿವಾಟು ನಡೆಸುತ್ತಿದೆ. ನಾನು ರಾಜಕೀಯದಲ್ಲಿ ಸಕ್ರಿಯನಾಗಿದ್ದರಿಂದ ವ್ಯವಹಾರದಲ್ಲಿ ತಲೆಹಾಕುತ್ತಿರಲಿಲ್ಲ. ಆದರೂ ಸಹ ನನ್ನ ಮೇಲೆ ಬಂದಿರುವ ಆರೋಪ ನನಗೆ ಬಹಳ ನೋವು ತಂದಿದೆ ಅಂತ ಧೀರಜ್ ಸಾಹು ಹೇಳಿದ್ದಾರೆ. ನಮ್ಮ ಸಂಸ್ಥೆಯ ವಹಿವಾಟು ಪಾರದರ್ಶಕವಾಗಿದೆ. ಮದ್ಯ ಮಾರಾಟವು ಬಹುತೇಕ ನಗದು ರೂಪದಲ್ಲೇ ಆಗುವುದಿಂದ ಅತ್ಯಧಿಕ ಪ್ರಮಾಣದಲ್ಲಿ ನಗದು ದೊರೆತಿದೆ ಎಂದಿರುವ ಸಾಹು, ಈ ಬಗ್ಗೆ ಅಧಿಕಾರಿಗಳ ವಿಚಾರಣೆಗೆ ನಾನು ಮತ್ತು ನನ್ನ ಕುಟುಂಬಸ್ಥರು ಸಂಪೂರ್ಣ ಸಹಕರಿಸಲಿದ್ದೇವೆ ಅಂತ ಸಂಸದ ಧೀರಜ್ ಸಾಹು ಹೇಳಿದ್ದಾರೆ.