ಜೂನ್ 25 ರಿಂದ ಜೂನ್ 27ರವರೆಗೆ ನಡೆಯಬೇಕಿದ್ದ CSIR-UGC NET ಪರೀಕ್ಷೆಯನ್ನು ಮುಂದೂಡಲಾಗಿದೆ. ಪರೀಕ್ಷೆ ಮುಂದೂಡಿಕೆ ಬಗ್ಗೆ ಇವತ್ತು ರಾಷ್ಟ್ರೀಯ ಪರೀಕ್ಷಾ ಸಂಸ್ಥೆ ಪ್ರಕಟಣೆ ಹೊರಡಿಸಿದೆ.
ಕೆಲವು ಅನಿವಾರ್ಯ ಕಾರಣಗಳಿಂದ ಮತ್ತು ಲಾಜಿಸ್ಟಿಕ್ ಕಾರಣದಿಂದ ಪರೀಕ್ಷೆಯನ್ನು ಮುಂದೂಡಲಾಗಿದೆ ಎಂದು ಎನ್ಟಿಎ ಹೇಳಿದೆ.
ವೈಜ್ಞಾನಿಕ ಮತ್ತು ಕೈಗಾರಿಕೆ ಸಂಶೋಧನಾ ಸಂಸ್ಥೆಯಲ್ಲಿ ಸಂಶೋಧನಾ ವಿದ್ಯಾರ್ಥಿಗಳನ್ನು ಆಯ್ಕೆ ಮಾಡುವ ಸಲುವಾಗಿ ಪ್ರತಿ ವರ್ಷ ಎರಡು ಬಾರಿ ರಾಷ್ಟ್ರೀಯ ಮಟ್ಟದಲ್ಲಿ ಪರೀಕ್ಷೆಯನ್ನು ನಡೆಸಲಾಗುತ್ತದೆ.
ಕಳೆದ ವರ್ಷ ಜೂನ್ ಅವಧಿಯಲ್ಲಿ ನಡೆದಿದ್ದ ಪರೀಕ್ಷೆಗೆ ದೇಶಾದ್ಯಂತ 2 ಲಕ್ಷದ 74 ಸಾವಿರ ಮಂದಿ ವಿದ್ಯಾರ್ಥಿಗಳು ಅರ್ಜಿ ಸಲ್ಲಿಸಿದ್ದರು ಮತ್ತು ಇವರಲ್ಲಿ 1 ಲಕ್ಷದ 99 ಸಾವಿರದ 890 ಮಂದಿ ಪರೀಕ್ಷೆಗೆ ಹಾಜರಾಗಿದ್ದರು.
ಜೂನ್ 18ರಂದು ರಾಷ್ಟ್ರೀಯ ಪರೀಕ್ಷಾ ಸಂಸ್ಥೆಯೇ ನಡೆಸಿದ್ದ ಯುಜಿಸಿ ನೆಟ್ ಪರೀಕ್ಷೆಯನ್ನು ಜೂನ್ 19ರಂದು ಅಂದರೆ ಮರು ದಿನವೇ ಕೇಂದ್ರ ಶಿಕ್ಷಣ ಸಚಿವಾಲಯ ರದ್ದುಗೊಳಿಸಿತ್ತು. ಆ ಪರೀಕ್ಷೆಯಲ್ಲಿ 9 ಲಕ್ಷ ಮಂದಿ ಅಭ್ಯರ್ಥಿಗಳು ಹಾಜರಾಗಿದ್ದರು. ಈ ಪರೀಕ್ಷೆಯ ಪ್ರಶ್ನೆ ಪತ್ರಿಕೆ ಟೆಲಿಗ್ರಾಂ ಮೂಲಕ ಸೋರಿಕೆ ಆಗಿರುವ ಹಿನ್ನೆಲೆಯಲ್ಲಿ ಪರೀಕ್ಷೆಯನ್ನು ರದ್ದುಗೊಳಿಸಲಾಗಿತ್ತು. ಈಗಾಗಲೇ ಕೇಂದ್ರೀಯ ತನಿಖಾ ದಳ ಸಿಬಿಐ ಅಪರಿಚಿತ ವ್ಯಕ್ತಿಗಳ ವಿರುದ್ಧ ಎಫ್ಐಆರ್ ದಾಖಲಿಸಿ ತನಿಖೆ ಆರಂಭಿಸಿದೆ/
ಮೇ 5ರಂದು ರಾಷ್ಟ್ರೀಯ ಪರೀಕ್ಷಾ ಸಂಸ್ಥೆಯೇ ನಡೆಸಿದ್ದ ರಾಷ್ಟ್ರೀಯ ವೈದ್ಯಕೀಯ ಶಿಕ್ಷಣ ಪ್ರವೇಶ ಪರೀಕ್ಷೆಯಲ್ಲಿ ಅಕ್ರಮ ನಡೆದಿದ್ದರ ಹಿನ್ನೆಲೆಯಲ್ಲಿ NEET ಪರೀಕ್ಷೆಯನ್ನೂ ರದ್ದುಗೊಳಿಸುವಂತೆ ಸುಪ್ರೀಂಕೋರ್ಟ್ನಲ್ಲಿ ಅರ್ಜಿ ಸಲ್ಲಿಸಲಾಗಿದ್ದು, ಈಗಾಗಲೇ ಅಕ್ರಮ ಸಂಬಂಧ ಹಲವರ ಬಂಧನವಾಗಿದೆ.
ADVERTISEMENT
ADVERTISEMENT