ಮಹತ್ವದ ಬೆಳವಣಿಗೆಯಲ್ಲಿ ಒಡಿಶಾ ಮುಖ್ಯಮಂತ್ರಿ ನವೀನ್ ಪಟ್ನಾಯಕ್ ಶನಿವಾರ ತಮ್ಮ ಸಚಿವ ಸಂಪುಟದ ಎಲ್ಲ 20 ಸಚಿವರ ರಾಜೀನಾಮೆ ಪಡೆದು ನೂತನ ಸಚಿ ಸಂಪುಟ ಅಸ್ತಿತ್ವಕ್ಕೆ ತಂದಿದ್ದಾರೆ. ಇಂದು ಭಾನುವಾರ 13 ಶಾಸಕರು ನೂತನ ಸಚಿವರಾಗಿ ಪ್ರಮಾಣವಚನ ಸ್ವೀಕರಿಸಿದ್ದಾರೆ.
ಇಂದು ಭುವನೇಶ್ವರದ ಲೋಕಸೇವಾ ಭವನದ ನೂತನ ಸಮಾವೇಶ ಕೇಂದ್ರದಲ್ಲಿ ನಡೆದ ಸಮಾರಂಭದಲ್ಲಿ ಬಿಜೆಡಿ ಶಾಸಕರಾದ ಜಗನ್ನಾಥ್ ಸರಕಾ, ನಿರಂಜನ್ ಪೂಜಾರಿ ಮತ್ತು ಆರ್ ಪಿ ಸ್ವೈನ್ ಸೇರಿದಂತೆ 13 ಶಾಸಕರು ನೂತನ ಸಚಿವರಾಗಿ ಪ್ರಮಾಣವಚನ ಸ್ವೀಕರಿಸಿದರು. ರಾಜ್ಯಪಾಲ ಗಣೇಶಿ ಲಾಲ್ ಅವರು ನೂತನ ಸಚಿವರಿಗೆ ಪ್ರತಿಜ್ಞಾವಿಧಿ ಬೋಧಿಸಿದರು.
ನವೀನ್ ಪಟ್ನಾಯಕ್ ಅವರು ಮೂವರು ಮಹಿಳಾ ಶಾಸಕರಾದ ಪ್ರಮೀಳಾ ಮಲ್ಲಿಕ್, ಉಷಾದೇವಿ ಮತ್ತು ತುಕುನಿ ಸಾಹು ಅವರನ್ನುಇಂದು ತಮ್ಮ ಸಂಪುಟಕ್ಕೆ ಸೇರಿಸಿಕೊಂಡಿದ್ದಾರೆ.
ಬಿಜೆಡಿಯ ಮೂಲಗಳ ಪ್ರಕಾರ, ಸರಕಾ ಒಬ್ಬ ಹೆಸರಾಂತ ಬುಡಕಟ್ಟು ನಾಯಕರಾಗಿದ್ದು ಅವರು ಭಗವಾನ್ ಜಗನ್ನಾಥನ ಹೆಸರಿನಲ್ಲಿ ಪ್ರಮಾಣವಚನ ಸ್ವೀಕರಿಸಿದ ಮೊದಲ ವ್ಯಕ್ತಿಯಾಗಿದ್ದಾರೆ.
ಈ ಮೂಲಕ ಮುಂದಿನ ಚುನಾವಣೆಗೆ ಮುಖ್ಯಮಂತ್ರಿ ನವೀನ್ ಪಟ್ನಾಯಕ್ ಅವರು ಭರ್ಜರಿ ತಯಾರಿ ಆರಂಭಿಸಿದ್ದಾರೆ.