ಬೆಂಗಳೂರು (Bangalore, Bengaluru) ಸೇರಿದಂತೆ ಕರ್ನಾಟಕದಲ್ಲಿ ಸೇವೆಗಳನ್ನು ನಿಲ್ಲಿಸುವಂತೆ ಓಲಾ, ಊಬರ್, ರ್ಯಾಪಿಡೋಗೆ ಸಾರಿಗೆ ಇಲಾಖೆ ಆದೇಶಿಸಿದೆ. ಅಂದರೆ ಇನ್ಮುಂದೆ Ola, Uber, Rapidoದಲ್ಲಿ ಆಟೋ ಬುಕ್ಕಿಂಗ್ ಮಾಡಲು ಸಾಧ್ಯವಿಲ್ಲ.
ಈ ಮೂರು APP ಆಧಾರಿತ ಕಂಪನಿಗಳು ನೀಡುತ್ತಿದ್ದ ಆಟೋ ಬುಕ್ಕಿಂಗ್ (Auto Booking) ಸೇವೆಯನ್ನು ಸಾರಿಗೆ ಇಲಾಖೆ (Transport Department) ಅಕ್ರಮ ಎಂದು ಪರಿಗಣಿಸಿ ಆದೇಶಿಸಿದೆ. ನಿಯಮಗಳ ಪ್ರಕಾರ ಕೇವಲ ಕ್ಯಾಬ್, ಟ್ಯಾಕ್ಸಿಗಳಿಗಷ್ಟೇ APP ಆಧಾರಿತ ಬುಕ್ಕಿಂಗ್ಗೆ ಅನುಮತಿ ಇದೆ ಎಂದು ಸಾರಿಗೆ ಇಲಾಖೆ ಹೇಳಿದೆ.
ಆಟೊ ಬುಕ್ಕಿಂಗ್ ಸಂದರ್ಭದಲ್ಲಿ ಸರ್ಕಾರ ನಿಗದಿಪಡಿಸಿದ ಮೂಲದರದ (Base Fare) ಬದಲು 100 ರೂಪಾಯಿ ಕನಿಷ್ಠ ದರ ವಸೂಲಿ ಮಾಡುವ ಮೂಲಕ ನಿಯಮ ಉಲ್ಲಂಘನೆ ಮಾಡಲಾಗುತ್ತಿದೆ ಎಂಬ ದೂರಿನ ಹಿನ್ನೆಲೆಯಲ್ಲಿ ಸಾರಿಗೆ ಇಲಾಖೆ ಈ ಆದೇಶ ಹೊರಡಿಸಿದೆ.
ಮೂರು ದಿನದೊಳಗೆ ಆಟೋ ಬುಕ್ಕಿಂಗ್ ನಿಲ್ಲಿಸುವಂತೆ ಸೂಚಿಸಲಾಗಿದೆ.
ನಿಯಮಗಳ ಪ್ರಕಾರ ಮೊದಲ ಎರಡು ಕಿಲೋ ಮೀಟರ್ ದೂರವರೆಗೆ ಆಟೋ ಪ್ರಯಾಣಕ್ಕೆ ಸರ್ಕಾರ ವಿಧಿಸಿರುವ ಕನಿಷ್ಠ ದರ 30 ರೂಪಾಯಿ ಮತ್ತು ಬಳಿಕ ಕನಿಷ್ಠ ದರದ ಜೊತೆಗೆ ಪ್ರತಿ 1 ಕಿಲೋ ಮೀಟರ್ಗೆ 15 ರೂಪಾಯಿ ನೀಡಬೇಕಾಗುತ್ತದೆ.
ಆದರೆ APP ಆಧಾರಿತ ಕಂಪನಿಗಳು ಪ್ರಯಾಣಿಕರಿಗೆ 2 ಕಿಲೋ ಮೀಟರ್ ಒಳಗಿನ ಪ್ರಯಾಣಕ್ಕೆ 100 ರೂಪಾಯಿ ವಸೂಲಿ ಮಾಡಿ ಸುಲಿಗೆ ಮಾಡುತ್ತಿವೆ ಎಂಬ ಆರೋಪಗಳ ಹಿನ್ನೆಲೆಯಲ್ಲಿ ಸಾರಿಗೆ ಇಲಾಖೆ ಈ ಆದೇಶ ಹೊರಡಿಸಿದೆ.