ದೇಶಾದ್ಯಂತ ಪ್ರತಿಭಟನೆ ನಡೆದ ಹಿನ್ನೆಲೆಯಲ್ಲಿ ಕೇಂದ್ರ ಸರ್ಕಾರವು ‘ಅಗ್ನಿಪಥ್’ ಸೇನಾ ನೇಮಕಾತಿಯಲ್ಲಿ ನಿಗದಿಗೊಳಿಸಿದ್ದ ವಯಸ್ಸಿನ ಮಿತಿಯನ್ನು 21 ರಿಂದ 23 ಕ್ಕೆ ಹೆಚ್ಚಿಸಿ ಆದೇಶ ಹೊರಡಿಸಿದೆ. ಕಳೆದ 2 ವರ್ಷಗಳಿಂದ ಯಾವುದೇ ನೇಮಕಾತಿ ನಡೆಸದ ಕಾರಣ ಈ ತೀರ್ಮಾನ ಕೈಗೊಳ್ಳಲಾಗಿದೆ ಎಂದು ಕೇಂದ್ರ ಸರ್ಕಾರ ಹೊರಡಿಸಿದ ಸುತ್ತೋಲೆಯಲ್ಲಿ ತಿಳಿಸಿದೆ.
ಅಗ್ನಿಪಥ್-2022 ಯೋಜನೆಯ ಸೇನಾ ನೇಮಕಾತಿಯಲ್ಲಿನ ಗರಿಷ್ಠ ವಯಸ್ಸಿನ ಮಿತಿಯನ್ನು 21 ರಿಂದ 23 ವಯಸ್ಸಿಗೆ ಹೆಚ್ಚಿಸಲಾಗಿದೆ. ಕಳೆದ 2 ವರ್ಷಗಳಿಂದ ಯಾವುದೇ ನೇಮಕಾತಿಯನ್ನು ನಡೆಸಲು ಸಾಧ್ಯವಾಗಿಲ್ಲ. ಈ ವಯಸ್ಸಿನ ಮಿತಿಯ ಹೆಚ್ಚಳ 2022 ರ ಒಂದು ನೇಮಕಾತಿಗೆ ಮಾತ್ರ ಸೀಮಿತ ಎಂದು ಕೇಂದ್ರ ಸರ್ಕಾರ ಹೊರಡಿಸಿದೆ ಆದೇಶದಲ್ಲಿ ಹೇಳಲಾಗಿದೆ.
ಭಾರತೀಯ ಸೇನೆಯ ಸರಾಸರಿ ವಯಸ್ಸನ್ನು ಕಡಿಮೆ ಮಾಡುವುದು ಹಾಗೂ ಪಿಂಚಣಿ ಖರ್ಚು ಕಡಿಮೆ ಮಾಡಲು ಕೇಂದ್ರ ಸರ್ಕಾರ ಅಗ್ನಿಪಥ್ ಯೋಜನೆಯನ್ನು ಆರಂಭಿಸಿದೆ. ಈ ಯೋಜನೆಯ ಪ್ರಕಾರ 17.5 ವರ್ಷದ ನಂತರ ಮತ್ತು 21 ವರ್ಷದ ಒಳಗಿನ ಯುವಕ/ಯುವತಿಯರನ್ನು ಸೇನೆಗೆ ನೇಮಕ ಮಾಡಿಕೊಳ್ಳಲಾಗುತ್ತದೆ. 4 ವರ್ಷದ ನಂತರ 4 ರಲ್ಲಿ 3 ರಷ್ಟು ಜನರನ್ನು ಸೇವೆಯಿಂದ ತೆಗೆದುಹಾಕಲಾಗುತ್ತದೆ.
ಈ ಯೋಜನೆಯ ವಿರುದ್ಧ ದೇಶಾದ್ಯಂತ ಸೇನಾ ಸೇವೆಯ ಆಕಾಂಕ್ಷಿಗಳು ಉಗ್ರ ಪ್ರತಿಭಟನೆ ನಡೆಸುತ್ತಿದ್ದಾರೆ. ದೇಶದ ಉತ್ತರ ಪ್ರದೇಶ, ಹರಿಯಾಣ, ಚಂಡೀಗಡ, ಪಂಜಾಬ್, ಹಿಮಾಚಲ ಪ್ರದೇಶ, ಉತ್ತರಾಖಂಡ್, ಜಾರ್ಖಂಡ್, ದೆಹಲಿ ಸೇರಿದಂತೆ 10 ರಾಜ್ಯಗಳಲ್ಲಿ ತೀವ್ರ ಸ್ವರೂಪದ ಪ್ರತಿಭಟನೆ ನಡೆಯುತ್ತಿದೆ. ಅಲ್ಲಲ್ಲಿ ಆಕ್ರೋಶಿತ ಅಭ್ಯರ್ಥಿಗಳು ರೈಲಿಗೆ ಬೆಂಕಿ ಹಚ್ಚಿರುವ ಪ್ರಕರಣಗಳು ವರದಿಯಾಗುತ್ತಿವೆ.