ಕಲಾಪದ ವೇಳೆ ಪ್ರತಿಪಕ್ಷಗಳ ವಿಚಾರದಲ್ಲಿ ಉದ್ದೇಶಪೂರ್ವಕವಾಗಿ ಪಕ್ಷಪಾತ ಹಾಗೂ ಪ್ರತಿಪಕ್ಷ ನಾಯಕರು ಮಾತನಾಡಲು ನೀಡುವ ಸಮಯದ ವಿಷಯದಲ್ಲಿ ತಾರತಮ್ಯ ಮಾಡಲಾಗ್ತಿದೆ ಅಂತ ಆರೋಪಿಸಿ ರಾಜ್ಯಸಭೆ ಸಭಾಪತಿ ಜಗದೀಪ್ ಧನ್ಕರ್ ವಿರುದ್ಧ ಮಂಗಳವಾರ ಬೆಳಿಗ್ಗೆ ವಿಪಕ್ಷಗಳು ಅವಿಶ್ವಾಸ ನಿರ್ಣಯ ಮಂಡಿಸಿವೆ.
ಸೋಮವಾರದ ಕಲಾಪದಲ್ಲಿ ಸಭಾಪತಿಯ ಪಕ್ಷಪಾತಿ ನಡೆ ಕುರಿತಾಗಿ ಆಕ್ಷೇಪಿಸಿದ್ದ ಪ್ರತಿಪಕ್ಷ ನಾಯಕರು, ಪ್ರಸಕ್ತ ಅಧಿವೇಶನದಲ್ಲೇ ಅವಿಶ್ವಾಸ ನಿರ್ಣಯ ಮಂಡಿಸಲು ನಿರ್ಧರಿಸಿ, ಸಭಾಪತಿ ವಿರುದ್ಧ ಮಂಡಿಸಲಿರುವ ಅವಿಶ್ವಾಸ ನಿರ್ಣಯ ಪತ್ರಕ್ಕೆ 70 ಸಂಸದರು ಸಹಿ ಹಾಕಿದ್ದಾರೆ ಎನ್ನಲಾಗಿತ್ತು.
ಇದೀಗ ಕಾಂಗ್ರೆಸ್ ನೇತೃತ್ವದ ಐಎನ್ಡಿಐಎ ಸದಸ್ಯರು ಅವಿಶ್ವಾಸ ಗೊತ್ತುವಳಿ ಮಂಡಿಸಿದ್ದಾರೆ. ಇದಕ್ಕೆ ಕಾಂಗ್ರೆಸ್, ಪಶ್ಚಿಮ ಬಂಗಾಳದ ಟಿಎಂಸಿ ಕಾಂಗ್ರೆಸ್, ಆಮ್ ಆದ್ಮಿ ಪಕ್ಷ, ಸಮಾಜವಾದಿ ಪಕ್ಷ, ತಮಿಳುನಾಡಿನ ದ್ರಾವಿಡ ಮುನ್ನೇತ್ರ ಕಳಗಂ ಮತ್ತು ರಾಷ್ಟ್ರೀಯ ಜನತಾ ದಳ ಪಕ್ಷದ 50ಕ್ಕೂ ಹೆಚ್ಚು ಸಂಸದರು ಸಹಿ ಹಾಕಿದ್ದಾರೆ. ಈಗಾಗಲೇ ನೋಟಿಸನ್ನು ರಾಜ್ಯಸಭಾ ಕಾರ್ಯದರ್ಶಿಗೆ ಸಲ್ಲಿಸಿದ್ದಾರೆ.
ಇನ್ನು ಸ್ಪೀಕರ್ ಧನಕರ್ ವಿರುದ್ಧ ಸದನದ ಸದಸ್ಯರ ನಡುವೆ ತಾರತಮ್ಯ ಮಾಡುತ್ತಿದ್ದಾರೆ ಅಂತ ಈಗಾಗಲೇ ಕಾಂಗ್ರೆಸ್, ಎಸ್ಪಿ ಮತ್ತು ಆಪ್ ಸಂಸದರು ಸಾಕಷ್ಟು ಬಾರಿ ಆರೋಪ ಮಾಡಿದ್ದರು.