ಪ್ರಧಾನಿ ರಾಜ್ಯ ಪ್ರವಾಸ ಹಿನ್ನೆಲೆಯಲ್ಲಿ ರಾಜ್ಯ ಸರ್ಕಾರ ಕಾಲೇಜುಗಳಿಗೆ ರಜೆ ನೀಡಿದೆ. ನಮ್ಮ ವಿದ್ಯಾರ್ಥಿಗಳೇನು ಭಯೋತ್ಪಾದಕರಾ..? ಸರ್ಕಾರದ ಈ ನಿರ್ಧಾರ ಖಂಡನೀಯ ಎಂದು ಕೆಪಿಸಿಸಿ ಅಧ್ಯಕ್ಷ ಡಿಕೆಶಿ ಶಿವಕುಮಾರ್ ಆಗ್ರಹವ್ಯಕ್ತಪಡಿಸಿದ್ದಾರೆ.
ಸದಾಶಿವನಗರ ನಿವಾಸದ ಬಳಿ ಸೋಮವಾರ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಕರ್ನಾಟಕ ಶಾಂತಿ ಪ್ರಿಯ ರಾಜ್ಯವಾಗಿದ್ದು, ಕನ್ನಡಿಗರು ವಿದ್ಯಾವಂತರು. ಅವರು ಎಂದಿಗೂ ಕಾನೂನನ್ನು ಕೈಗೆತ್ತಿಕೊಳ್ಳುವುದಿಲ್ಲ. ಪ್ರತಿಭಟನೆ ನಡೆಸುವುದಾದರೆ ಅದನ್ನು ಕ್ರಮಬದ್ಧ, ಕಾನೂನುಬದ್ಧ ರೀತಿಯಲ್ಲಿ ಮಾಡುತ್ತಾರೆ. ಆದರೆ ಸರ್ಕಾರ ಯಾಕೆ ಇಷ್ಟು ಚಿಂತಿತವಾಗಿದೆ ಎಂಬುದೇ ಅರ್ಥವಾಗುತ್ತಿಲ್ಲ.
ನಮ್ಮ ವಿದ್ಯಾರ್ಥಿಗಳು ಭಯೋತ್ಪಾದಕರಲ್ಲ, ಅವರು ವಿದ್ಯಾವಂತ ಹಾಗೂ ಕಾನೂನಿಗೆ ತಲೆಬಾಗುವ ನಾಗರೀಕರು. ಬೆಂಗಳೂರಿನ ವಿದ್ಯಾರ್ಥಿಗಳು ದೇಶಕ್ಕೆ ಕೀರ್ತಿ ತರುವಂತಹ ಪ್ರತಿಭಾವಂತರು. ಅವರ ವ್ಯಾಸಂಗಕ್ಕೆ ರಜೆ ನೀಡಿರುವ ಸರ್ಕಾರದ ನಿರ್ಧಾರವನ್ನು ನಾನು ಖಂಡಿಸುತ್ತೇನೆ. ನಮ್ಮ ವಿದ್ಯಾರ್ಥಿಗಳನ್ನು ಅವರ ರಾಜಕೀಯ ಲಾಭಕ್ಕೆ ಬಳಸಿಕೊಳ್ಳಬಾರದು.’
ಇನ್ನು ಕಾಂಗ್ರೆಸ್ ಪಕ್ಷದ ಪ್ರತಿಭಟನೆ ಕುರಿತು ಕೇಳಿದ ಪ್ರಶ್ನೆಗೆ, ಪ್ರತಿಭಟನೆ ಮಾಡುವ ಹಕ್ಕು ನಮಗಿದೆ. ಕೇಂದ್ರ ಸರ್ಕಾರ ಕಾನೂನನ್ನು ರಾಜಕೀಯ ಲಾಭಕ್ಕೆ ಬಳಸಿಕೊಳ್ಳುತ್ತಿದ್ದು, ನಮ್ಮ ನಾಯಕರಾದ ರಾಹುಲ್ ಗಾಂಧಿ ಹಾಗೂ ಸೋನಿಯಾ ಗಾಂಧಿ ಅವರು ಯಾವುದೇ ತಪ್ಪು ಮಾಡಿಲ್ಲ. ಅವರು ಸಲ್ಲಿಸಿರುವ ಚುನಾವಣಾ ಅಫಿಡವಿಟ್ ನಲ್ಲಿ ಈ ಸಂಸ್ಥೆಯ ಮಾಲೀಕತ್ವವನ್ನು ಘೋಷಿಸಿಕೊಂಡಿಲ್ಲ. ಈ ಸಂಸ್ಥೆ ಲಾಭಯೇತರ ಸಂಸ್ಥೆಯಾಗಿದ್ದು, ಸ್ವಾತಂತ್ರ್ಯದ ಸಮಯದಲ್ಲಿ ಹಾಗೂ ನಂತರ ಕಾಂಗ್ರೆಸ್ ಧ್ವನಿಯಾಗಲು ನೆಹರೂ ಅವರು ಈ ಪತ್ರಿಕೆಯನ್ನು ಆರಂಭಿಸಿದ್ದು, ನಾವು ಅದನ್ನು ಉಳಿಸಿಕೊಂಡು ಹೋಗುತ್ತಿದ್ದೇವೆ ಎಂದು ಉತ್ತರಿಸಿದರು.