ಮಹತ್ವದ ಬೆಳವಣಿಗೆಯೊಂದರಲ್ಲಿ ರಾಜ್ಯ ಸರ್ಕಾರ ಎಲ್ಲಾ ಇಲಾಖೆಗಳಲ್ಲಿ ಹೊರಗುತ್ತಿಗೆ ಮಹಿಳಾ ಉದ್ಯೋಗಿಗಳಿಗೆ ಶೇ 33ರಷ್ಟು ಮೀಸಲಾತಿ ನೀಡಿದೆ. ಈ ಸಂಬಂಧ ಮುಖ್ಯ ಕಾರ್ಯದರ್ಶಿ ಪಿ.ರವಿಕುಮಾರ್ ಶುಕ್ರವಾರ ಸುತ್ತೋಲೆ ಹೊರಡಿಸಿದ್ದಾರೆ.
ಪ್ರಸ್ತುತ ರಾಜ್ಯದಲ್ಲಿ 7.2 ಲಕ್ಷ ಮಂಜೂರಾದ ಹುದ್ದೆಗಳಲ್ಲಿ 4.6 ಲಕ್ಷ ಉದ್ಯೋಗಿಗಳು ಕರ್ತವ್ಯ ನಿರ್ವಹಿಸುತ್ತಿದ್ದು, ಇದರಲ್ಲಿ 1.5 ಲಕ್ಷ ಹೊರಗುತ್ತಿಗೆ ಸಿಬ್ಬಂದಿಗಳಿದ್ದಾರೆ. ಇದೀಗ ಈ ಹುದ್ದೆಗಳಲ್ಲಿ 50 ಸಾವಿರ ಹುದ್ದೆಗಳು ಮಹಿಳೆಯರಿಗೆ ಮೀಸಲಿಡಲಾಗುತ್ತದೆ.
ಸುತ್ತೋಲೆಯಲ್ಲಿ ರಾಜ್ಯ ಸರಕಾರದ ಕಚೇರಿಗಳಲ್ಲಿ ಹೊರಗುತ್ತಿಗೆ ಮೂಲಕ ಪಡೆಯಲಾಗುವ ಸೇವೆ ಮತ್ತು ಹುದ್ದೆಗಳಲ್ಲಿ ಶೇ. 33ರಷ್ಟು ಹುದ್ದೆಗಳನ್ನು ಮಹಿಳಾ ಅಭ್ಯರ್ಥಿಗಳಿಂದ ಭರ್ತಿ ಮಾಡಿಕೊಳ್ಳುವಂತೆ ಎಲ್ಲ ಇಲಾಖೆಗಳಿಗೆ ಸೂಚನೆ ನೀಡಿದೆ.
ಡಾಟಾ ಎಂಟ್ರಿ ಆಪರೇಟರ್, ಡಿ-ಗ್ರೂಪ್ ಹುದ್ದೆಗಳನ್ನು ಹೊರಗುತ್ತಿಗೆ ಮೂಲಕ ಪಡೆಯುವ ಟೆಂಡರ್ ಪ್ರಕಟನೆ ಮತ್ತು ಹೊರಗುತ್ತಿಗೆ ಏಜೆನ್ಸಿಗಳೊಂದಿಗೆ ಮಾಡಿ ಕೊಳ್ಳಲಾಗುವ ಒಪ್ಪಂದದಲ್ಲಿ ಈ ಅಂಶವನ್ನು ಸೇರಿಸಲು ಸಂಬಂಧಪಟ್ಟ ಟೆಂಡರ್ ಆಹ್ವಾನಿಸುವ ಪ್ರಾಧಿಕಾರಗಳು ಕ್ರಮ ಕೈಗೊಳ್ಳಬೇಕು ಎಂದೂ ಸೂಚಿಸಲಾಗಿದೆ.