ಹಿಂದೂ ಉದ್ಯಮಿಯೊಬ್ಬರನ್ನು ಅಪರಿಚಿತ ದುಷ್ಕರ್ಮಿಗಳು ಗುಂಡಿಕ್ಕಿ ಹತ್ಯೆ ಮಾಡಿರುವ ಘಟನೆ ಪಾಕಿಸ್ತಾನದ ಸಿಂಧ್ ನ ಘೋಟ್ಕಿ ಜಿಲ್ಲೆಯ ದಹರ್ಕಿ ಟೌನ್ನಲ್ಲಿ ಸೋಮವಾರ ರಾತ್ರಿ ನಡೆದಿದೆ.
ಹತ್ಯೆಗೆ ಒಳಗಾದ ವ್ಯಕ್ತಿಯನ್ನು ಸೈತಾನ್ ಲಾಲ್ ಎಂದು ಗುರುತಿಸಲಾಗಿದೆ. ಉದ್ಯಮಿ ಸೈತಾನ್ಲಾಲ್ ಹಿಂದೂ ಧರ್ಮದ ದಾಹರ್ ಸಮುದಾಯಕ್ಕೆ ಸೇರಿದವರಾಗಿದ್ದಾರೆ. ಪಾಕಿಸ್ತಾನದ ಸಿಂದ್ ಪ್ರಾಂತ್ಯದ ದಾಹರ್ಕಿ ನಗರದಿಂದ ಎರಡು ಕಿ.ಮೀ ದೂರದಲ್ಲಿ ಅವರು ವಾಸಿಸುತ್ತಿದ್ದರು.
ಸೈತಾನ್ಲಾಲ್ ಜಮೀನಿನಲ್ಲಿ ಹತ್ತಿ ಕಾರ್ಖಾನೆ ಹಾಗೂ ಹಿಟ್ಟಿನ ಗಿರಣಿ ಉದ್ಘಾಟನಾ ಕಾರ್ಯಕ್ರಮ ನಡೆಯಿತು. ಈ ಕಾರ್ಯಕ್ರಮದ ಸಂದರ್ಭದಲ್ಲಿ ಕೆಲ ದುಷ್ಕರ್ಮಿಗಳು ಉದ್ಯಮಿಯ ಮೇಲೆ ಗುಂಡು ಹಾರಿಸಿದ್ದಾರೆ ಎಂದು ಸ್ಥಳೀಯ ಪತ್ರಿಕೆಯೊಂದು ವರದಿಮಾಡಿದೆ.
ನಾನು ಪಾಕಿಸ್ತಾನ ತೊರೆಯದಿದ್ದರೆ, ನನ್ನ ಕೈಕಾಲುಗಳನ್ನು ಕತ್ತರಿಸಿ ಕೊಲೆ ಮಾಡುವುದಾಗಿ ಕೆಲವರು ಬೆದರಿಕೆ ಹಾಕುತ್ತಿದ್ದಾರೆ ಎಂದು ಕೆಲ ದಿನಗಳ ಹಿಂದಷ್ಟೇ ಸೈತಾನ್ ಲಾಲ್ ಹೇಳಿಕೊಂಡಿದ್ದರು. ಮಂಗಳವಾರ ಹಲವು ಮಂದಿ ಹೆದ್ದಾರಿಯನ್ನು ತಡೆದು ಪ್ರತಿಭಟನೆ ನಡೆಸಿದ್ದಾರೆ.
ಕೆಲವೇ ದಿನಗಳ ಹಿಂದೆಯಷ್ಟೇ, ಜನವರಿ 4 ರಂದು ಸಿಂಧ್ ಪ್ರಾಂತ್ಯದ ಅನಾಜ್ ಮಂಡಿಯಲ್ಲಿ ಇನ್ನೊಬ್ಬ ಹಿಂದೂ ಉದ್ಯಮಿ ಸುನೀಲ್ ಕುಮಾರ್ ಅವರನ್ನು ಅಪರಿಚಿತ ಜನರು ಗುಂಡಿಕ್ಕಿ ಕೊಂದಿದ್ದರು. ಹಾಗೆಯೇ, ಜನವರಿ 30 ರಂದು, ಪಾಕಿಸ್ತಾನದ ವಾಯುವ್ಯ ಪೇಶಾವರ್ ನಗರದಲ್ಲಿ ಅಪರಿಚಿತ ಬಂದೂಕುಧಾರಿಗಳು ಒಬ್ಬ ಕ್ರಿಶ್ಚಿಯನ್ ಪಾದ್ರಿಯನ್ನು ಗುಂಡಿಕ್ಕಿ ಕೊಂದಿದ್ದರು.