3 ವರ್ಷ ಪಾಕಿಸ್ತಾನದ ಪ್ರಧಾನ ಮಂತ್ರಿಯಾಗಿದ್ದ ಮಾಜಿ ಕ್ರಿಕೆಟಿಗ ಇಮ್ರಾನ್ ಖಾನ್ ಶನಿವಾರ ರಾತ್ರಿ ವಿರೋಧ ಪಕ್ಷಗಳ ಅವಿಶ್ವಾಸ ನಿರ್ಣಯ ಮಂಡನೆಯಲ್ಲಿ ಸೋತು ಪದಚ್ಯುತಗೊಂಡರು. ಇದೀಗ ಪಾಕಿಸ್ತಾನದ ನೂತನ ಪ್ರಧಾನಿಯಾಗಿ ವಿರೋಧ ಪಕ್ಷದ ನಾಯಕನಾಗಿದ್ದ ಶೆಹಬಾಜ್ ಷರೀಪ್ ನೇಮಕವಾಗುವ ಸಾಧ್ಯತೆ ದಟ್ಟವಾಗಿದೆ.
342 ಸದಸ್ಯ ಬಲದ ಸಂಸತ್ನಲ್ಲಿ ಅವಿಶ್ವಾಸ ನಿರ್ಣಯದ ಪರವಾಗಿ 174 ಮತಗಳು ಚಲಾವಣೆಗೊಂಡವು. ಇದರೊಂದಿಗೆ ಇಮ್ರಾನ್ ಪ್ರಧಾನಿ ಸ್ಥಾನದಿಂದ ಕೆಳಗಿಳಿಯಬೇಕಾಯಿತು.
ಪಾಕಿಸ್ತಾನದ ಸಂಸತ್ತು ನ್ಯಾಷನಲ್ ಅಸೆಂಬ್ಲಿಯಲ್ಲಿ ಸೋಮವಾರ ಹೊಸ ಪ್ರಧಾನಿಯ ಆಯ್ಕೆ ನಡೆಯಲಿದೆ. ಸೋಮವಾರ ಪಾಕಿಸ್ತಾನ ಸಂಸತ್ತು ಹೊಸದಾಗಿ ಸಮಾವೇಶಗೊಳ್ಳಲಿದ್ದು, ಪ್ರತಿಪಕ್ಷ ನಾಯಕ ಶೆಹಬಾಜ್ ಷರೀಫ್ ನೇತೃತ್ವದಲ್ಲಿ ಹೊಸ ಸರ್ಕಾರ ರಚನೆಯಾಗುವ ಸಾಧ್ಯತೆಯಿದೆ.
ಮೂರು ಬಾರಿ ಪ್ರಧಾನಿಯಾಗಿದ್ದ ನವಾಜ್ ಷರೀಫ್ ಅವರ ತಮ್ಮನಾದ ಶೆಹಬಾಜ್, ಇಮ್ರಾನ್ ವಿರುದ್ಧದ ಅವಿಶ್ವಾಸ ನಿರ್ಣಯ ಮಂಡನೆಯ ಐತಿಹಾಸಿಕ ಘಟನೆಯಲ್ಲಿ ವಿರೋಧಪಕ್ಷಗಳನ್ನು ಮುನ್ನಡೆಸಿದರು. ವಿರೋಧ ಪಕ್ಷಗಳು ಈಗಾಗಲೇ ಪಾಕಿಸ್ತಾನ್ ಮುಸ್ಲಿಂ ಲೀಗ್-ನವಾಜ್ (ಪಿಎಂಎಲ್-ಎನ್) ಅಧ್ಯಕ್ಷ ಶೆಹಬಾಜ್ ಷರೀಫ್ ಅವರನ್ನು ಪ್ರಧಾನಿ ಅಭ್ಯರ್ಥಿಯಾಗಿ ಘೋಷಿಸಿವೆ.