ವಾಯವ್ಯ ಪಾಕಿಸ್ತಾನದ ಅಫ್ಗಾನಿಸ್ತಾನ ಗಡಿ ಪ್ರದೇಶದ ಸಣ್ಣ ಮಾರುಕಟ್ಟೆಯೊಂದರಲ್ಲಿ ಶನಿವಾರ ಸಂಜೆ ನಡೆದ ಆತ್ಮಾಹುತಿ ಬಾಂಬ್ ದಾಳಿಯಲ್ಲಿ ಮೂವರು ಮಕ್ಕಳು ಹಾಗೂ ಮೂವರು ಯೋಧರು ಮೃತಪಟ್ಟಿದ್ದಾರೆ.
ಉತ್ತರ ವಜೀರಿಸ್ತಾನದ ಮಿರಾನ್ ಶಾ ಪ್ರದೇಶದ ಮಾರುಕಟ್ಟೆಯಲ್ಲಿ ಆತ್ಮಾಹುತಿ ದಾಳಿಕೋರ ಬಾಂಬ್ ಸ್ಫೋಟಿಸಿದ್ದಾನೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ನಡೆದುಕೊಂಡು ಬಂದ ಬಾಂಬರ್ ಭದ್ರತಾ ವಾಹನವೊಂದು ಹಾದುಹೋಗುತ್ತಿದ್ದಾಗ ಸ್ಫೋಟಿಸಿಕೊಂಡಿದ್ದಾನೆ ಎಂದು ಸರ್ಕಾರಿ ಅಧಿಕಾರಿಯೊಬ್ಬರು ‘ಎಎಫ್ಪಿ’ ಸುದ್ದಿಸಂಸ್ಥೆಗೆ ತಿಳಿಸಿದ್ದಾರೆ.
ಪಾಕಿಸ್ತಾನ ಪ್ರಧಾನಿ ಶಹಬಾಝ್ ಷರೀಫ್ ದಾಳಿಯನ್ನು ಖಂಡಿಸಿದ್ದು, ಮುಗ್ಧ ಮಕ್ಕಳನ್ನು ಹತ್ಯೆ ಮಾಡಿದವರು ಮಾನವೀಯತೆ ಮತ್ತು ಇಸ್ಲಾಂನ ವಿರೋಧಿಗಳು ಎಂದು ಹೇಳಿದ್ದಾರೆ.
ಉತ್ತರ ವಜೀರಿಸ್ತಾನ ಸೇರಿ ಪಾಕಿಸ್ತಾನ ಮತ್ತು ಅಫ್ಗಾನಿಸ್ತಾನವನ್ನು ಪ್ರತ್ಯೇಕಿಸುವ ಪರ್ವತ ಪ್ರದೇಶಗಳಲ್ಲಿ ಬಹಳ ಹಿಂದಿನಿಂದಲೂ ಉಗ್ರ ಚಟುವಟಿಕೆಗಳು ನಡೆಯುತ್ತಿವೆ. ಭದ್ರತಾ ಪಡೆಗಳಿಂದ ತಪ್ಪಿಸಿಕೊಳ್ಳಲು ಭಯೋತ್ಪಾದಕರು ಈ ಪ್ರದೇಶಗಳನ್ನು ಅಡಗುದಾಣಗಳನ್ನಾಗಿ ಮಾಡಿಕೊಂಡಿದ್ದಾರೆ ಎಂದು ಭದ್ರತಾ ಮೂಲಗಳು ಹೇಳಿವೆ.