ನಿರುದ್ಯೋಗ, ಅಗ್ನಿವೀರ್ ಯೋಜನೆ ಜಾರಿ ಬಳಿಕ ಸೇನಾ ನೇಮಕಾತಿಯಲ್ಲಿ ಕೈ ತಪ್ಪಿದ ಅವಕಾಶ, ಬೆಲೆ ಏರಿಕೆ, ರೈತರ ಹೋರಾಟ, ಮಣಿಪುರದಲ್ಲಿ ನಡೆದ ಹಿಂಸಾಚಾರ, ಪ್ರಧಾನಿ ಮೋದಿ ಸರ್ಕಾರದ ಆಡಳಿತ ವೈಖರಿ ವಿರುದ್ಧ ಅಸಮಾಧಾನ – ಸಂಸತ್ತಿಗೆ ನುಗ್ಗಿ ಭದ್ರತಾ ಲೋಪ ಎಸಗಿದ್ದ ಐವರ ಕೃತ್ಯದ ಹಿಂದಿನ ಸಾಮಾನ್ಯ ಕಾರಣಗಳು.
ಜೊತೆಗೆ ಈ ಐವರೂ ಕ್ರಾಂತಿಕಾರಿ ಭಗತ್ ಸಿಂಗ್, ಸಂವಿಧಾನ ಶಿಲ್ಪಿ ಅಂಬೇಡ್ಕರ್ ಮತ್ತು ಸ್ವಾಮಿ ವಿವೇಕಾನಂದರ ಚಿಂತನೆಗಳಿಂದ ಪ್ರಭಾವಿತರಾಗಿದ್ದರು. ಈ ಆರೋಪಿಗಳೆಲ್ಲರೂ ಭಗತ್ ಸಿಂಗ್ ಫ್ಯಾನ್ಸ್ ಫೇಸ್ಬುಕ್ ಪೇಜ್ ಮೂಲಕ ಪರಸ್ಪರ ಪರಿಚಯ ಆದವರು.
ಸಂಸತ್ತಿನಲ್ಲಿ ಆಗಿರುವ ಭದ್ರತಾ ಲೋಪ ಸಂಬಂಧ ಇಲ್ಲಿಯವರೆಗೆ ಐವರನ್ನು ಬಂಧಿಸಲಾಗಿದೆ. ಈ ಐವರೂ ಐದು ರಾಜ್ಯಗಳಿಗೆ ಸೇರಿದವರು. ಆರನೇ ಆರೋಪಿ ಲಲಿತ್ ಝಾಗಾಗಿ ಹುಡುಕಾಟ ನಡೆಸಲಾಗುತ್ತಿದೆ.
ಮನೋರಂಜನ್ ಡಿ:
ಕರ್ನಾಟಕದ ಮೈಸೂರು ನಗರದ ವಿಜಯನಗರದವನು. ಈತನ ತಂದೆಯ ಹೆಸರು ದೇವರಾಜ್ ಡಿ. 34 ವರ್ಷದ ಈತ 10 ವರ್ಷಗಳ ಹಿಂದೆ Bengaluru Institute of Technology (BIT)ನಿಂದ ಮಾಹಿತಿ ತಂತ್ರಜ್ಞಾನ ಪದವಿ ಪಡೆದಿದ್ದ. ಈತ ಸಾಕಷ್ಟು ಪುಸ್ತಕಗಳನ್ನು ಓದುತ್ತಿದ್ದ. ಅದರಲ್ಲೂ ವಿಶೇಷವಾಗಿ ಭಗತ್ ಸಿಂಗ್ ಮತ್ತು ವಿವೇಕಾನಂದರ ಚಿಂತನೆಗಳಿಂದ ಪ್ರಭಾವಕ್ಕೊಳಗಾಗಿದ್ದ.
ಸಾಗರ್ ಶರ್ಮಾ:
ಮೂಲತಃ ಉತ್ತರಪ್ರದೇಶ ಉನೌವ್ ಜಿಲ್ಲೆಯವನು. ವಯಸ್ಸು 27. ಲಕ್ನೋದಲ್ಲಿ ಎಲೆಕ್ಟ್ರಿಕ್ ರಿಕ್ಷಾ ಓಡಿಸಿಕೊಂಡು ಬಾಡಿಗೆ ಮನೆಯಲ್ಲಿ ತನ್ನ ತಂಗಿ ಮತ್ತು ಪೋಷಕರ ಜೊತೆಗೆ ವಾಸವಾಗಿದ್ದ. ತನ್ನ ಫೇಸ್ಬುಕ್ ಖಾತೆಯಲ್ಲಿ ಭಗತ್ ಸಿಂಗ್ ಮತ್ತು ಚೆಗೆವೆರಾ ಬಗ್ಗೆ ಉಲ್ಲೇಖ ಮಾಡಿದ್ದ.
ಇವರಿಬ್ಬರಿಗೂ ವೀಕ್ಷಕರ ಗ್ಯಾಲರಿಯ ಪಾಸ್ ಕೊಡಿಸಿದ್ದು ಮೈಸೂರು-ಕೊಡಗು ಲೋಕಸಭಾ ಕ್ಷೇತ್ರದ ಸಂಸದ ಪ್ರತಾಪ್ ಸಿಂಹ.
ನೀಲಂ ದೇವಿ ಯಾದವ್:
ಈಕೆ ಹರಿಯಾಣ ರಾಜ್ಯದ ಜಿಂದ್ ಜಿಲ್ಲೆಯ ಖುರ್ದ್ ಗ್ರಾಮದಾಕೆ. ವಯಸ್ಸು 37. ಬಿ.ಎ, ಎಂ.ಎ, ಬಿ.ಎಡ್, ಎಂ.ಎಡ್, ಎಂ.ಫಿಲ್ ಹೀಗೆ ಐದು ಪದವಿಗಳ ಪದವೀಧರೆ. ಹರಿಯಾಣ ಸರ್ಕಾರ ನಡೆಸುವ ಶಿಕ್ಷಕರ ಅರ್ಹತಾ ಪರೀಕ್ಷೆಯಲ್ಲಿ ಪಾಸಾಗಿದ್ದರೂ ನೌಕರಿ ಸಿಕ್ಕಿರಲಿಲ್ಲ. ಹರಿಯಾಣ ಮತ್ತು ಪಂಜಾಬ್ ರೈತರು ಜೊತೆಯಾಗಿ ನಡೆಸಿದ್ದ ಹೋರಾಟದಲ್ಲಿ ಈಕೆ ಪಾಲ್ಗೊಂಡಿದ್ದಳು. ಬಿಜೆಪಿ ಸಂಸದನ ವಿರುದ್ಧ ಮಹಿಳಾ ಕುಸ್ತಿಪಟುಗಳು ನಡೆಸಿದ್ದ ಹೋರಾಟದ ವೇಳೆ ಈಕೆಯನ್ನು ಪೊಲೀಸರು ವಶಕ್ಕೆ ಪಡೆದಿದ್ದರು. ಈಕೆಯ ಇಬ್ಬರು ಸಹೋದರರು ಹಾಲು ಮಾರಿ ಜೀವನ ಸಾಗಿಸ್ತಿದ್ದಾರೆ. ಈಕೆ ಭಗತ್ ಸಿಂಗ್ ಮತ್ತು ಅಂಬೇಡ್ಕರ್ ಚಿಂತನೆಗಳಿಂದ ಪ್ರಭಾವಕ್ಕೆ ಒಳಗಾಗಿದ್ದಳು.
ಅಮೋಲ್ ಶಿಂಧೆ:
ಮಹಾರಾಷ್ಟ್ರದ ಲಾತೂರು ಜಿಲ್ಲೆಯ ಝಾರಿ ಬುದ್ರುಕ್ ಊರಿನ 25 ವರ್ಷದ ಯುವಕ. ಈತ ತಂದೆ-ತಾಯು ಕೃಷಿ ಕಾರ್ಮಿಕರು. 12ನೇ ತರಗತಿ ಪಾಸ್ ಆಗಿದ್ದ ಈತ ಹಲವು ಬಾರಿ ಸೇನೆ ಮತ್ತು ಪೊಲೀಸ್ ನೇಮಕಾತಿಯಲ್ಲಿ ಪ್ರಯತ್ನ ಪಟ್ಟಿದ್ದರೂ ಉದ್ಯೋಗ ಸಿಕ್ಕಿರಲಿಲ್ಲ. ಅಗ್ನಿವೀರ್ ಯೋಜನೆ ಜಾರಿಯಾದ ಬಳಿಕ ಈತ ಸೇನೆ ನೇಮಕಾತಿಯಲ್ಲಿ ಭಾಗವಹಿಸುವ ಅವಕಾಶವನ್ನೇ ಕಳೆದುಕೊಂಡಿದ್ದ.