ಸಂಸತ್ ಕಟ್ಟಡಕ್ಕೆ ನುಗ್ಗಿ ಭದ್ರತಾ ಲೋಪ ಎಸಗಿದವರ ಮೇಲೆ ಭಯೋತ್ಪಾದಕ ಕೃತ್ಯಗಳನ್ನು ನಿಗ್ರಹಿಸುವ ಕಾಯ್ದೆಯ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ.
ನವದೆಹಲಿಯ ಸಂಸತ್ ಬೀದಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಭಾರತ ದಂಡ ಸಂಹಿತೆ ಕಲಂಗಳಾದ 153 (ದಂಗೆಗೆ ಪ್ರಚೋದನೆ ನೀಡುವುದು), 120-ಬಿ (ಕ್ರಿಮಿನಲ್ ಒಳಸಂಚು), 452 (ಅಕ್ರಮವಾಗಿ ಒಳನುಸುಳುವುದು), 186 (ಸಾರ್ವಜನಿಕ ಕರ್ತವ್ಯಗಳನ್ನು ನಿರ್ವಹಿಸದಂತೆ ಸಾರ್ವಜನಿಕ ಸೇವಕನಿಗೆ ಅಡ್ಡಿಪಡಿಸುವುದು), 353 (ಸಾರ್ವಜನಿಕ ಕರ್ತವ್ಯಗಳ ನಿರ್ವಹಿಸದಂತೆ ಸಾರ್ವಜನಿಕ ಸೇವಕನ ಮೇಲೆ ಹಲ್ಲೆ ಮಾಡುವುದು) ಅಡಿಯಲ್ಲಿ ಎಫ್ಐಆರ್ ದಾಖಲಾಗಿದೆ.
ಅಲ್ಲದೇ ಅಕ್ರಮ ಚಟುವಟಿಕೆಗಳನ್ನು ತಡೆಯುವ ಕಾಯ್ದೆಯ ಕಲಂ 16 ಮತ್ತು 18 (ದೇಶದ ವಿರುದ್ಧ ಭಯೋತ್ಪಾದಕ ಚಟುವಟಿಕೆ ನಡೆಸುವವರಿಗೆ ವಿಧಿಸಲಾಗುವ ಶಿಕ್ಷೆ ಕುರಿತ ಕಲಂ)ಗಳ ಅಡಿಯಲ್ಲಿ ಪ್ರಕರಣ ದಾಖಲಾಗಿದೆ.
UAPA ಕಾಯ್ದೆಯ ಕಲಂ 16ರಡಿಯಲ್ಲಿ ಭಯೋತ್ಪಾದಕ ದಾಳಿಯಲ್ಲಿ ಒಂದು ವೇಳೆ ಯಾರಾದರೂ ಮೃತಪಟ್ಟರೇ ಆ ಕೃತ್ಯದಲ್ಲಿ ಭಾಗಿಯಾದ ಆರೋಪಿಗೆ ಮರಣದಂಡನೆ ಶಿಕ್ಷೆ ವಿಧಿಸಬಹುದು. ಇಲ್ಲವಾದಲ್ಲಿ ಕನಿಷ್ಠ 5 ವರ್ಷ ಅಥವಾ ಜೀವಾವಧಿ ಶಿಕ್ಷೆಯನ್ನೂ ವಿಧಿಸಬಹುದು.
UAPA ಕಾಯ್ದೆಯ ಕಲಂ 18ರಡಿಯಲ್ಲಿ ಕ್ರಿಮಿನಲ್ ಒಳಸಂಚಿನಲ್ಲಿ ಭಾಗಿಯಾದ ಅಪರಾಧಿಗೆ ಕನಿಷ್ಠ 5 ವರ್ಷ ಅಥವಾ ಜೀವಾವಧಿ ಶಿಕ್ಷೆಯನ್ನೂ ವಿಧಿಸಬಹುದು.
ಭಯೋತ್ಪಾದಕ ಕೃತ್ಯಗಳನ್ನು ಹತ್ತಿಕ್ಕಲ್ಲೆಂದೇ ರಚನೆ ಆಗಿರುವ ದೆಹಲಿ ಪೊಲೀಸರ ವಿಶೇಷ ಘಟಕದ ಪ್ರತಿ ಗುಪ್ತಚರ ಘಟಕ (Counter Intelligence Unit of Special Cell)ಗೆ ಪ್ರಕರಣವನ್ನು ಹಸ್ತಾಂತರಿಸಲಾಗಿದೆ.
ಇವತ್ತು ಐವರೂ ಆರೋಪಿಗಳನ್ನು ದೆಹಲಿಯ ಪಟಿಯಾಲಾ ಹೌಸ್ ಕೋರ್ಟ್ನಲ್ಲಿ ಹಾಜರುಪಡಿಸಿ ಹೆಚ್ಚಿನ ವಿಚಾರಣೆಗಾಗಿ ಪೊಲೀಸ್ ಕಸ್ಟಡಿಗೆ ನ್ಯಾಯಾಲಯದಲ್ಲಿ ಪೊಲೀಸರು ಮನವಿ ಮಾಡಲಿದ್ದಾರೆ.
ADVERTISEMENT
ADVERTISEMENT