ಸ್ವಾತಂತ್ರ್ಯ ಪೂರ್ವದಲ್ಲಿ..
ಇಂಕ್ವಿಲಾಬ್ ಜಿಂದಾಬಾದ್.. ಎಂದು ಭಗತ್ ಸಿಂಗ್, ಬಟುಕೇಶ್ವರ್ ದತ್ ಬಾಂಬ್ ಹಾಕುತ್ತಾ ಮಾಡಿದ ಕ್ರಾಂತಿಯ ನಾದಕ್ಕೆ ಸಾಕ್ಷಿ
ಮೊದಲ ಸ್ವಾತಂತ್ರ್ಯೋತ್ಸವದಲ್ಲಿ..
ವಿಧಿಲಿಖಿತ ಸಮಯ ಎನ್ನುತ್ತಾ ಜವಾಹರ್ ಲಾಲ್ ನೆಹರೂ ಭಾವೋದ್ವೇಗದಿಂದ ಸುರಿಸಿದ ಆನಂದ ಭಾಷ್ಪಕ್ಕೆ ಸಾಕ್ಷಿ..
ಸ್ವಾತಂತ್ರ್ಯ ನಂತರದಲ್ಲಿ..
ಅನೇಕ ಚಾರಿತ್ರಿಕ ಘಟ್ಟಗಳಿಗೆ.. ಆಧುನಿಕ ಭಾರತದ ಪ್ರಸ್ಥಾನಕ್ಕೆ.. ಮಹಾನ್ನಾಯಕರಿಗೆ ಪ್ರತ್ಯಕ್ಷ ಸಾಕ್ಷಿಯಾಗಿ ನಿಂತಿದೆ 96 ವರ್ಷಗಳ ಹಳೆಯ ಸಂಸತ್ ಭವನ..
1911ರಲ್ಲಿ ಕೊಲ್ಕೊತಾದಿಂದ ರಾಜಧಾನಿಯನ್ನು ದೆಹಲಿಗೆ ಶಿಫ್ಟ್ ಮಾಡಲು ನಿರ್ಧರಿಸಿದ ಬ್ರಿಟೀಷ್ ಸರ್ಕಾರ, ಇದಕ್ಕಾಗಿ ನವದೆಹಲಿಯನ್ನು ಪ್ರತ್ಯೇಕವಾಗಿ ನಿರ್ಮಿಸಿತು.1913ರಲ್ಲಿ ನವದೆಹಲಿ ನಿರ್ಮಾಣಕ್ಕೆ ಯೋಜನೆ ರೂಪಿಸಲಾಯಿತು. ಈ ಸಮಯದಲ್ಲಿ ಸಂಸತ್ ಭವನ ನಿರ್ಮಾಣದ ಆಲೋಚನೆ ಆಂಗ್ಲರಲ್ಲಿ ಇರಲಿಲ್ಲ. ಗೌರ್ನರ್ ಜನರಲ್ ನಿವಾಸ(ಈಗಿನ ರಾಷ್ಟ್ರಪತಿ ಭವನ)ದಲ್ಲಿಯೇ ಲೆಜಿಸ್ಲೇಟೀವ್ ಕೌನ್ಸಿಲ್ ಸಭಾ ಮಂದಿರ ನಿರ್ಮಾಣ ಮಾಡಿದರೇ ಸಾಕು ಎಂದು ಭಾವಿಸಿತ್ತು. ಏಕೆಂದರೇ ಲೆಜಿಸ್ಲೇಟೀವ್ ಕೌನ್ಸಿಲ್ ತುಂಬಾ ಚಿಕ್ಕದು. ಬೇಸಿಗೆಯಲ್ಲಾದರರೇ ಶಿಮ್ಲಾದಲ್ಲಿರುವ ವೈಸ್ರಾಯ್ ಲಾಡ್ಜ್ನಲ್ಲಿಯೇ ಸಮಾವೇಶಗಳನ್ನು ನಿರ್ಹಿಸುತ್ತಿದ್ದರು. ಚಳಿಗಾಲದಲ್ಲಿ ದೆಹಲಿಯ ಸರ್ಕಾರಿ ಸೆಕ್ರಟರಿಯೇಟ್ ಭವನ (ಈಗಿನ ದೆಹಲಿ ಅಸೆಂಬ್ಲಿ)ದಲ್ಲಿ ಸಮಾವೇಶಗಳನ್ನು ನಡೆಸುತ್ತಿದ್ದರು. ಅದಕ್ಕೆ ಪ್ರತ್ಯೇಕ ಸಂಸತ್ ಭವನದ ಆಲೋಚನೆ ಹೊಳೆದಿರಲಿಲ್ಲ.
ಆದರೆ,1918ರಲ್ಲಿ ಮಾಂಟೆಗೋ ಚೆಮ್ಸ್ಫೋರ್ಡ್ ತಂದ ಸುಧಾರಣೆಗಳಿಂದಾಗಿ ಶಾಸನಸಭೆಗಳ ಪ್ರಾಧಾನ್ಯತೆ ಹೆಚ್ಚಿತು. ಸಂಖ್ಯೆ ಕೂಡ ಹೆಚ್ಚಾಯಿತು. ಕೆಳಮನೆ, ಮೇಲ್ಮನೆ ಅಸ್ತಿತ್ವಕ್ಕೆ ಬಂದವು. ಇವುಗಳ ನಿರ್ವಹಣೆ ಜೊತೆಗೆ ಆಡಳಿತಸದಸ್ಯರ, ಸಿಬ್ಬಂದಿಯ ಸಂಖ್ಯೆ ಕೂಡ ಹೆಚ್ಚಾಯಿತು. ಹೀಗಾಗಿ ಬ್ರಿಟೀಷ್ ಸರ್ಕಾರ ಎರಡು ಯೋಜನೆಗಳ ಪ್ರಸ್ತಾಪವನ್ನು ಮಾಡಿತು. 1 ಷಾಮಿಯಾನ ಕೆಳಗೆ ಸಭೆ ನಡೆಸುವುದು.2 .ಭವನ ನಿರ್ಮಾಣ.. ಷಾಮಿಯಾನ ಕೆಳಗೆ ಸಭೆ ಮಾಡಿದರೆ ಮರ್ಯಾದೆ ಹೋಗುತ್ತೆ ಎನ್ನುವ ಕಾರಣಕ್ಕೆ ಭವನ ನಿರ್ಮಾಣಕ್ಕೆ ಒಲವು ತೋರಲಾಯಿತು. 1921ರಲ್ಲಿ ಸೆಕ್ರೆಟರಿಯೇಟ್ ಬಿಲ್ಡಿಂಗ್ನಲ್ಲಿ ಒಂದು ದೊಡ್ಡ ಚೇಂಬರ್ ನಿರ್ಮಾಣ ಮಾಡಿದರು. ಅದೇ ಸೆಂಟ್ರಲ್ ಲೆಜಿಸ್ಲೇಟೀವ್ ಅಸೆಂಬ್ಲಿ (ಕೆಳಮನೆ)ಯ ಮೊದಲ ಕಟ್ಟಡ.
ಆರು ಎಕರೆಯಲ್ಲಿ… 144 ಪಿಲ್ಲರ್ಗಳೊಂದಿಗೆ..
ಇಷ್ಟರಲ್ಲಿ ಹೊಸದಿಲ್ಲಿಯ ಶಿಲ್ಪಿಗಳಾದ ಬ್ರಿಟೀಷ್ ಆರ್ಕಿಟೆಕ್ಟ್ಗಳಾದ ಎಡ್ವಿನ್ ಲ್ಯೂಟಿನ್, ಹೆರ್ಬರ್ಡ್ ಬೇಕರ್ ಅವರು ಕೆಳಮನೆ, ಮೇಲ್ಮನೆಯ ಶಾಸನಸಭೆಗಳಿಗೆ ಶಾಶ್ವತ ಭವನ ನಿರ್ಮಾಣವನ್ನು ಪ್ರತಿಪಾದಿಸಿದರು. ಲ್ಯೂಟನ್ ವೃತ್ತಕಾರದಲ್ಲಿ.. ಬೇಕರ್ ತ್ರಿಕೋನಾಕಾರದಲ್ಲಿ ಪ್ರಣಾಳಿಕೆ ತಯಾರಿಸಿದರು. ಕೊನೆಗೆ ಲ್ಯೂಟನ್ ಅವರ ಯೋಜನೆಗೆ ಬ್ರಿಟೀಷ್ ಸರ್ಕಾರ ಒಲವು ತೋರಿತು. 1921ರ ಫೆಬ್ರವರಿ 12ರಂದು ಡ್ಯೂಕ್ ಆಫ್ ಕನ್ಹಾಟ್ ಪ್ರಿನ್ಸ್ ಅರ್ಥರ್ ಹೊಸ ಸಂಸತ್ ಭವನಕ್ಕೆ ಶಂಕುಸ್ಥಾಪನೆ ಮಾಡಿದರು. ಆರು ವರ್ಷಗಳ ನಂತರ ನಿರ್ಮಾಣವಾದ ಈ ಭವನವನ್ನು 1927ರ ಜನವರಿ 19ರಂದು ಅಂದಿನ ಭಾರತದ ವೈಸ್ರಾಯ್ ಆಗಿದ್ದ ಲಾರ್ಡ್ ಇರ್ವಿನ್ ಉದ್ಘಾಟಿಸಿದರು.
ಆರು ಎಕರೆ ವಿಸ್ತೀರ್ಣದಲ್ಲಿ 144 ಪಿಲ್ಲರ್ಗಳೊಂದಿಗೆ (ಒಂದೊಂದರ ಎತ್ತರ 27 ಅಡಿ) ನಿರ್ಮಾಣವಾದ ಈ ಸುಂದರ ಕಟ್ಟಡದ ಮಧ್ಯೆ ಸೆಂಟ್ರಲ್ ಹಾಲ್, ಅದರ ಪಕ್ಕದಲ್ಲೇ ಮೂರು ಅರ್ಧ ವೃತ್ತಾಕಾರದ ಚೇಂಬರ್ಗಳು.. ಸುತ್ತಲೂ ಉದ್ಯಾನವನ ಇದ್ದು ಎಲ್ಲರ ಗಮನ ಸೆಳೆಯುತ್ತಿತ್ತು. ಈ ಭವನದ ಆಕೃತಿಗೆ ಮಧ್ಯಪ್ರದೇಶದ ಚೌಸತ್ ಯೋಗಿನಿ ದೇವಾಲಯ ಆಕೃತಿಯೇ ಪ್ರೇರಣೆ ಎನ್ಲಾಗುತ್ತದೆ. ಆ ಕಾಲದಲ್ಲಿ ಈ ಕಟ್ಟಡ ಬರೀ ನಮ್ಮ ದೇಶದಲ್ಲಿ ಮಾತ್ರವಲ್ಲ.. ಇಡೀ ಜಗತ್ತನ್ನೇ ಆಕರ್ಷಿಸಿತ್ತು.
ಇಲ್ಲಿಯೇ ಅಧಿಕಾರ ಹಸ್ತಾಂತರ
ಸೆಂಟ್ರಲ್ ಹಾಲ್ ಸುತ್ತ ಇರುವ ಒಂದು ಚೇಂಬರ್ನಲ್ಲಿ ಸಂಸ್ಥಾನಧೀಶರ ಸಭೆ (ಚೇಂಬರ್ ಆಪ್ ಪ್ರಿನ್ಸೆಸ್), ಮತ್ತೊಂದರಲ್ಲಿ ಸ್ಟೇಟ್ ಕೌನ್ಸಿಲ್ (ಈಗಿನ ರಾಜ್ಯಸಭೆ), ಮೂರನೆಯದರಲ್ಲಿ ಸೆಂಟ್ರಲ್ ಲೆಜಿಸ್ಲೇಟೀವ್ ಅಸೆಂಬ್ಲಿ(ಈಗಿನ ಲೋಕಸಭೆ) ಇದ್ದವು. ಈ ಲೆಜಿಸ್ಲೇಟೀವ್ ಅಸೆಂಬ್ಲಿಯಲ್ಲಿ ಕ್ರಾಂತಿಕಾರಿ ಭಗತ್ ಸಿಂಗ್, ಬಟುಕೇಶ್ವರ್ ದತ್ ಬಾಂಬ್ ಎಸೆದು ಸಂಚಲನ ಸೃಷ್ಟಿಸಿದ್ದರು. ಸ್ವಾತಂತ್ರ್ಯ ನಂತರ ಅಧಿಕಾರ ಹಸ್ತಾಂತರ ಕೂಡ ಇಲ್ಲಿಯೇ ನಡೆಯಿತು. ಹೊಸ ತಯಾರಿಗಳು ಮುಗಿಯುವವರೆಗೆ ಸುಪ್ರೀಂಕೋರ್ಟ್ ಕೂಡ ಚೇಂಬರ್ ಆಫ್ ಪ್ರಿನ್ಸೆಸ್ನಲ್ಲಿಯೇ ನಡೆಯುತ್ತಿತ್ತು. ಯುಪಿಎಸ್ಸಿ ಕಾರ್ಯಾಲಯ ಕೂಡ ಸಂಸತ್ ಭವನದಲ್ಲಿಯೇ ಇತ್ತು. ಸ್ಥಳಭಾವವನ್ನು ನಿಭಾಯಿಸಲು 1956ರಲ್ಲಿ ಸಂಸತ್ ಭವನದಲ್ಲಿ ಮತ್ತೆರಡು ಅಂತಸ್ತುಗಳನ್ನು ನಿರ್ಮಿಸಲಾಯಿತು. ಆದರೂ ಸ್ಥಳಾಭಾವ ಮುಂದುವರೆದಿತ್ತು. ಲೋಕಸಭೆ ಮಾಜಿ ಸ್ಪೀಕರ್ ಮೀರಾ ಕುಮಾರ್ ಅವರಂತೂ, ಈ ಭವನ ಕಣ್ಣೀರಿಡುತ್ತಿದೆ ಎನ್ನುತ್ತಿದ್ದರು.2001ರಲ್ಲಿ ಲಷ್ಕರ್ ಉಗ್ರರ ದಾಳಿಯನ್ನು ಈ ಸಂಸತ್ ಭವನ ಎದುರಿಸಿತ್ತು.
ಸ್ವಾತಂತ್ರ್ಯ ಭಾರತದಲ್ಲಿ ಅತ್ಯಂಕ ಪ್ರಮುಖ ಕಾಯ್ದೆಗಳಿಗೆ.. ಎಮೆರ್ಜೆನ್ಸಿಯಂತಹ ಕರಾಳ ಅಧಯಾಯಗಳಿಗೆ.. ಆಧುನಿಕ ಭಾರತದ ಪ್ರಸ್ಥಾನಕ್ಕೆ ಎಡೆ ಮಾಡಿಕೊಟ್ಟ ಸುಧಾರಣೆಗಳಿಗೆ.. ಕನ್ನಡಿಯಂತೆ ನಿಂತ ಈ ಪ್ರಜಾಪ್ರಭುತ್ವ ದೇಗುಲವೀಗ 96ರ ಹರೆಯದಲ್ಲಿ ವಿಶ್ರಾಂತಿ ತೆಗೆದುಕೊಳ್ಳಲಿದೆ.. ನಿಶಾಂತ ಪ್ರಶಾಂತ ಏಕಾಂತ ಸೌಧದಂತೆ ವಿಶ್ರಮಿಸು ಜಹಾಪನಾ..
ADVERTISEMENT
ADVERTISEMENT