ತೆಲಂಗಾಣ ರಾಜ್ಯಪಾಲರಾದ ತಮಿಳಿಸೈ ಸೌಂದರರಾಜನ್ ಅವರು ವೈದ್ಯೆಯಾಗಿ ವಿಮಾನದಲ್ಲಿ ತಮ್ಮ ಕರ್ತವ್ಯವನ್ನು ನಿರ್ವಹಿಸಿದರು. ದೆಹಲಿಯಿಂದ ಹೈದರಾಬಾದ್ಗೆ ತೆರಳುತ್ತಿದ್ದ ಇಂಡಿಗೋ ಏರ್ಲೈನ್ಸ್ ವಿಮಾನದಲ್ಲಿದ್ದ ಹೆಚ್ಚುವರಿ ಪೊಲೀಸ್ ಮಹಾನಿರ್ದೇಶಕ ಶ್ರೇಣಿಯ ಐಪಿಎಸ್ ಅಧಿಕಾರಿಯ ಜೀವವನ್ನು ಉಳಿಸಿದ್ದಾರೆ.
ವಿಮಾನದಲ್ಲಿ ಪ್ರಾಥಮಿಕ ಚಿಕಿತ್ಸೆ ಬಳಿಕ 1994ರ ಬ್ಯಾಚ್ನ ಅಧಿಕಾರಿಯಾಗಿರುವ ಕೃಪಾನಂದ ತ್ರಿಪಾಠಿ ಉಜೇಲಾ ಅವರು ಡೆಂಗ್ಯೂ ಜ್ವರದಿಂದ ಬಳಲುತ್ತಿದ್ದು ಹೈದರಾಬಾದ್ನ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
“ಮೇಡಂ ಗವರ್ನರ್ ನನ್ನ ಜೀವವನ್ನು ಉಳಿಸಿದರು. ಅವರು ನನಗೆ ತಾಯಿಯಂತೆ ಸಹಾಯ ಮಾಡಿದರು. ಇಲ್ಲದಿದ್ದರೆ ನಾನು ಆಸ್ಪತ್ರೆಗೆ ಬರಲು ಸಾಧ್ಯವಾಗುತ್ತಿರಲಿಲ್ಲ” ಎಂದು ಉಜೇಲಾ ತಿಳಿಸಿದ್ದಾರೆ.
ಆಂಧ್ರಪ್ರದೇಶ ಕೇಡರ್ಗೆ ಸೇರಿದ ಉಜೇಲಾ ಅವರು ಪ್ರಸ್ತುತ ಹೆಚ್ಚುವರಿ ಡಿಜಿಪಿ (ರಸ್ತೆ ಸುರಕ್ಷತೆ) ಆಗಿ ನೇಮಕಗೊಂಡಿದ್ದಾರೆ.
ವೃತ್ತಿಯಲ್ಲಿ ವೈದ್ಯರಾಗಿರುವ ರಾಜ್ಯಪಾಲರು ಶುಕ್ರವಾರ ಮಧ್ಯರಾತ್ರಿ ತೆಲಂಗಾಣ ರಾಜಧಾನಿಗೆ ಹಾರಾಟ ನಡೆಸುತ್ತಿದ್ದಾಗ ಐಪಿಎಸ್ ಅಧಿಕಾರಿ ಅಸ್ವಸ್ಥಗೊಂಡ ನಂತರ ಅವರಿಗೆ ಪ್ರಾಥಮಿಕ ಚಿಕಿತ್ಸೆ ನೀಡಿದರು.
ಮೇಡಂ ಗವರ್ನರ್ ಪರೀಕ್ಷಿಸಿದಾಗ ನನ್ನ ಹೃದಯ ಬಡಿತ ಕೇವಲ 39 ಆಗಿತ್ತು. ಅವರು ನನಗೆ ಮುಂದೆ ಬಾಗಲು ಸಲಹೆ ನೀಡಿದರು ಮತ್ತು ವಿಶ್ರಾಂತಿಗೆ ಸಹಾಯ ಮಾಡಿದರು. ಇದು ನನ್ನ ಉಸಿರಾಟವನ್ನು ಸ್ಥಿರಗೊಳಿಸಿತು ಎಂದು ಉಜೇಲಾ ಹೇಳಿದ್ದಾರೆ.
ಹೈದರಾಬಾದ್ಗೆ ಬಂದಿಳಿದ ನಂತರ ಐಪಿಎಸ್ ಅಧಿಕಾರಿ ಕೃಪಾನಂದ ತ್ರಿಪಾಠಿ ಉಜೇಲಾ ನೇರವಾಗಿ ಆಸ್ಪತ್ರೆಗೆ ತೆರಳಿದರು. ಅಲ್ಲಿ ಅವರಿಗೆ ಸರಣಿ ಪರೀಕ್ಷೆಗಳನ್ನು ನಡೆಸಿದಾಗ ಡೆಂಗ್ಯೂ ಇರುವುದು ಪತ್ತೆಯಾಯಿತು . ಗವರ್ನರ್ ಮೇಡಂ ಆ ವಿಮಾನದಲ್ಲಿ ಇಲ್ಲದಿದ್ದರೆ, ನಾನು ತುಂಬಾ ತೊಂದರೆಗೆ ಸಿಲುಕುತ್ತಿದ್ದೆ. ಅವರು ನನಗೆ ಹೊಸ ಜೀವನವನ್ನು ನೀಡಿದರು ಎಂದು ಉಜೇಲಾ, ಸೌಂದರರಾಜನ್ ಅವರಿಗೆ ಕೃತಜ್ಞತೆಗಳನ್ನು ವ್ಯಕ್ತಪಡಿಸಿದರು.