ಪಟಿಯಾಲಾ ಘರ್ಷಣೆಯ ಪ್ರಮುಖ ಆರೋಪಿ ಬರ್ಜಿಂದರ್ ಸಿಂಗ್ ಪರ್ವಾನಾ ನನ್ನು ಬಂಧಿಸಲಾಗಿದೆ ಎಂದು ಪಂಜಾಬ್ ಪೊಲೀಸರು ಭಾನುವಾರ ತಿಳಿಸಿದ್ದಾರೆ.
ಈ ಕುರಿತು ಪಟಿಯಾಲದಲ್ಲಿ ಮಾಧ್ಯಮವನ್ನು ಉದ್ದೇಶಿಸಿ ಮಾತನಾಡಿದ ಪೊಲೀಸ್ ಮಹಾನಿರೀಕ್ಷಕ (ಪಟಿಯಾಲ ಶ್ರೇಣಿ) ಮುಖ್ವಿಂದರ್ ಸಿಂಗ್ ಚೀನಾ, ಪ್ರಮುಖ ಆರೋಪಿ ಬರ್ಜಿಂದರ್ ಸಿಂಗ್ ಪರ್ವಾನಾ ಅವರನ್ನು ಮೊಹಾಲಿಯಿಂದ ಬಂಧಿಸಿ ಕರೆತರಲಾಗಿದೆ ಎಂದು ಹೇಳಿದರು.
ಹೆಚ್ಚಿನ ವಿಚಾರಣೆಗಾಗಿ ಪರ್ವಾನಾನನ್ನು ಪಟಿಯಾಲಾ ನ್ಯಾಯಾಲಯದ ಮುಂದೆ ಹಾಜರುಪಡಿಸಲಾಗುವುದು . ಪಟಿಯಾಲಾ ಜಿಲ್ಲೆಯ ರಾಜಪುರ ನಿವಾಸಿಯಾಗಿರುವ ಪರ್ವಾನಾ ಶುಕ್ರವಾರದ ಘಟನೆಯ ಮಾಸ್ಟರ್‌ಮೈಂಡ್‌ಗಳಲ್ಲಿ ಒಬ್ಬ ಎಂದು ಪೊಲೀಸರು ತಿಳಿಸಿದ್ದಾರೆ.
ಈ ಪ್ರಕರಣದಲ್ಲಿ ಆರು ಎಫ್‌ಐಆರ್‌ಗಳನ್ನು ದಾಖಲಿಸಲಾಗಿದ್ದು, ಒಟ್ಟು 25 ಮಂದಿಯನ್ನು ಹೆಸರಿಸಲಾಗಿದೆ. ಶುಕ್ರವಾರ ಶಿವಸೇನೆ (ಬಾಳ್ ಠಾಕ್ರೆ) ಸದಸ್ಯರು ಖಲಿಸ್ತಾನ್ ಮುರ್ದಾಬಾದ್ ಮಾರ್ಚ್ ಆರಂಭಿಸಿದಾಗ ಕಾಳಿ ಮಾತಾ ದೇವಸ್ಥಾನದ ಹೊರಗೆ ಘರ್ಷಣೆಗಳು ನಡೆದವು. ಶುಕ್ರವಾರದ ಘಟನೆಗೆ ಸಂಬಂಧಿಸಿದಂತೆ ಈಗಾಗಲೇ ಸಿಂಗ್ಲಾ, ದಲ್ಜೀತ್ ಸಿಂಗ್ ಮತ್ತು ಕುಲದೀಪ್ ಸಿಂಗ್ ಅವರನ್ನು ಬಂಧಿಸಲಾಗಿದೆ.
ಬಂಧಿತ ಬರ್ಜಿಂದರ್ ಸಿಂಗ್ ಪರ್ವಾನಾ ನನ್ನು ಮೊಹಾಲಿ ಪೊಲೀಸರು ನ್ಯಾಯಾಧೀಶರ ಮುಂದೆ ಹಾಜರು ಪಡಿಸಿದ್ದು, ನ್ಯಾಯಾಧೀಶರು ಆರೋಪಿಯನ್ನು 4 ದಿನ ಪೊಲೀಸ್ ವಶಕ್ಕೆ ನೀಡಿ ಆದೇಶಿದ್ದಾರೆ.
ಕಳೆದ ಶುಕ್ರವಾರ ಖಲಿಸ್ತಾನ್ ವಿರೋಧಿ ಮೆರವಣಿಗೆಯಲ್ಲಿ ಎರಡು ಗುಂಪುಗಳು ಘರ್ಷಣೆಗೆ ಒಳಗಾಗಿದ್ದವು. ಪರಸ್ಪರ ಕಲ್ಲು ತೂರಾಟ ನಡೆಸಿ ಕತ್ತಿಗಳನ್ನು ಬೀಸಲಾಗಿತ್ತು. ಪರಿಸ್ಥಿತಿಯನ್ನು ಹತೋಟಿಗೆ ತರಲು ಪೊಲೀಸರು ಗಾಳಿಯಲ್ಲಿ ಗುಂಡು ಹಾರಿಸಿದ್ದರು. ಹಿಂಸಾಚಾರಕ್ಕೆ ತಿರುಗಿದ ಘರ್ಷಣೆಯಲ್ಲಿ ನಾಲ್ವರು ಗಾಯಗೊಂಡಿದ್ದರು.