ಕರ್ನಾಟಕದಲ್ಲಿ ಪೆಟ್ರೋಲ್ ಮತ್ತು ಡೀಸೆಲ್ ಬೆಲೆ ಲೀಟರ್ಗೆ 5 ರಿಂದ 7 ರೂಪಾಯಿ ದುಬಾರಿ ಆಗುವ ಸಾಧ್ಯತೆ ಇದೆ. ಪೆಟ್ರೋಲ್, ಡೀಸೆಲ್ ಪೂರೈಕೆ ಕೊರತೆ ಹಿನ್ನೆಲೆಯಲ್ಲಿ ಬೆಲೆ ಏರಿಕೆ ಅನಿವಾರ್ಯ ಆಗುವ ಸ್ಥಿತಿಗೆ ಬಂದಿದೆ.
ಕೃತಕ ಅಭಾವದಿಂದಾಗಿ ತೈಲ ಕಂಪನಿಗಳು ಪ್ರತಿ ಲೀಟರ್ಗೆ 21 ರೂಪಾಯಿ ನಷ್ಟ ಅನುಭವಿಸುತ್ತಿರುವುದರಿಂದ ಆ ನಷ್ಟವನ್ನು ಗ್ರಾಹಕರ ಮೇಲೆ ವರ್ಗಾಯಿಸುವ ಸಾಧ್ಯತೆ ಇದೆ ಎಂದು ಇಂಗ್ಲೀಷ್ ದೈನಿಕ ಡೆಕ್ಕನ್ ಹೆರಾಲ್ಡ್ ವರದಿ ಮಾಡಿದೆ.
ಕರ್ನಾಟಕ ಪ್ರತಿ ತಿಂಗಳು 9.34 ಲಕ್ಷ ಟನ್ನ್ನಷ್ಟು ಪೆಟ್ರೋಲಿಯಂ ಉತ್ಪನ್ನಗಳನ್ನು ಉಪಯೋಗಿಸುತ್ತಿದೆ.
`ಬೆಂಗಳೂರಲ್ಲಿ ತೈಲೋತ್ಪನ್ನಗಳ ಪೂರೈಕೆಯಲ್ಲಿ ಕೊರತೆ ಉಂಟಾಗಿದ್ದು, ಎರಡ್ಮೂರು ದಿನಗಳಲ್ಲಿ ಅದರ ಪರಿಣಾಮ ಗೊತ್ತಾಗಬಹುದು. ಅತೀ ದೊಡ್ಡ ಪೂರೈಕೆದಾರ ಆಗಿರುವ ಐಒಸಿಎಲ್ನಿಂದ ಪೂರೈಕೆಯಲ್ಲಿ ಯಾವುದೇ ಕೊರತೆ ಆಗಿಲ್ಲ. ಆದರೆ ಶೇಕಡಾ 40ರಷ್ಟು ಪೂರೈಸುತ್ತಿರುವ ಬಿಪಿಸಿಎಲ್ ಮತ್ತು ಹೆಚ್ಪಿಸಿಎಲ್ ನಿಂದ್ ಪೂರೈಕೆ ಅಷ್ಟೊಂದು ಇಲ್ಲ’ ಎಂದು ಬಂಕ್ ಮಾಲೀಕರು ಹೇಳಿದ್ದಾರೆ. `ಶೀಘ್ರವೇ ಖಾಸಗಿ ಪೆಟ್ರೋಲ್ ಬಂಕ್ಗಳಲ್ಲಿ ಪೆಟ್ರೋಲ್ 7 ರೂಪಾಯಿ ದುಬಾರಿ ಆಗಬಹುದು’ ಎಂದು ವರದಿ ಮಾಡಿದೆ.
`ಅಂತಾರಾಷ್ಟ್ರೀಯ ಮಟ್ಟದಲ್ಲಿ ಕಚ್ಚಾತೈಲ ಬೆಲೆ ಕುಸಿತ ಕಂಡಿಡೆಯಾದರೂ ತೈಲ ಸಂಸ್ಕರಣಾ ಕಂಪನಿಗಳು ಎರಡು ತಿಂಗಳ ಹಿಂದಿನ ಬ್ಯಾರೆಲ್ ದರದಲ್ಲೇ ತೈಲೋತ್ಪನ್ನಗಳನ್ನು ಪೂರೈಸುತ್ತಿದೆ. ಬಿಪಿಸಿಎಲ್ ಒಟ್ಟಿ ಬೇಡಿಕೆಯ ಶೇಕಡಾ 50ರಷ್ಟನ್ನು ಮಾತ್ರ ಪೂರೈಕೆ ಮಾಡುತ್ತಿದ್ದು, ಇದು ಮುಂದುವರಿದ್ದಲ್ಲಿ ಹಲವು ಬಂಕ್ಗಳಲ್ಲಿ ಪೆಟ್ರೋಲ್, ಡೀಸೆಲ್ ಸಿಗದೇ ಇರಬಹುದು’ ಎಂದು ಬಂಕ್ ಮಾಲೀಕರು ಆತಂಕ ವ್ಯಕ್ತಪಡಿಸಿದ್ದಾರೆ.