ಮಹತ್ವದ ಬೆಳವಣಿಗೆಯಲ್ಲಿ ಕೇಂದ್ರ ಸರ್ಕಾರ ಪೀಪಲ್ಸ್ ಫ್ರಂಟ್ ಆಫ್ ಇಂಡಿಯಾ PFIಯನ್ನು ಐದು ವರ್ಷಗಳವರೆಗೆ ನಿಷೇಧಿಸಿದೆ. ಇವತ್ತು ನಸುಕಿನ ಜಾವ 5.43ಕ್ಕೆ ಪಿಎಫ್ಐ ನಿಷೇಧಿಸಿ ಕೇಂದ್ರ ಗೃಹ ಸಚಿವಾಲಯ ಆದೇಶ ಹೊರಡಿಸಿರುವುದು ವಿಶೇಷ.
ಪಿಎಫ್ಐ ಮೇಲೆ ನಿಷೇಧ ಹೇರಿ ಕೇಂದ್ರ ಗೃಹ ಸಚಿವಾಲಯ (Union Home Ministry) ಆದೇಶ ಹೊರಡಿಸಿದೆ.
ಭಯೋತ್ಪಾದನಾ ಚಟುವಟಿಕೆ ನಿಗ್ರಹಕ್ಕಿರುವ UAPA ಕಾಯ್ದೆಯಡಿ ಪಿಎಫ್ಐಗೆ ನಿಷೇಧ ಹೇರಲಾಗಿದೆ. ಭಯೋತ್ಪಾದಕ ಕೃತ್ಯಗಳಲ್ಲಿ ಭಾಗಿ ಆಗುವ ಮೂಲಕ ಈ ಸಂಘಟನೆಗಳು ದೇಶದ ಭದ್ರತೆ ಮತ್ತು ರಾಜ್ಯಗಳಲ್ಲಿ ಕಾನೂನು ಸುವ್ಯವಸ್ಥೆಗೆ ಮಾರಕವಾಗಿವೆ ಎಂದು ಕೇಂದ್ರ ಗೃಹ ಸಚಿವಾಲಯ ತನ್ನ ನಿಷೇಧ ಆದೇಶದಲ್ಲಿ ತಿಳಿಸಿದೆ.
ಹಿಜಾಬ್ ಹೋರಾಟದ ಮುಂಚೂಣಿಯಲ್ಲಿರುವ ಕ್ಯಾಂಪಸ್ ಫ್ರಂಟ್ ಆಫ್ ಇಂಡಿಯಾದ ಮೇಲೂ ಐದು ವರ್ಷ ನಿಷೇಧ ಹೇರಲಾಗಿದೆ.
ನಿಷೇಧವಾದ ಪಿಎಫ್ಐ ಮತ್ತು ಅದರ ಸಹವರ್ತಿ ಸಂಘಟನೆಗಳು:
1. ಪಿಎಫ್ಐ (PFI)
2. ಕ್ಯಾಂಪಸ್ ಫ್ರಂಟ್ ಆಫ್ ಇಂಡಿಯಾ (CFI)
3. ರೆಹಾಬ್ ಇಂಡಿಯಾ ಫೌಂಡೇಷನ್ (Rehab India Foundation)
4. ಅಖಿಲ ಭಾರತ ಇಮಾಮ್ ಕೌನ್ಸಿಲ್ (All India Imam Council)
5. ಮಾನವ ಹಕ್ಕುಗಳುಗಾಗಿನ ಸಂಘಗಳ ರಾಷ್ಟ್ರೀಯ ಒಕ್ಕೂಟ (National Confederation for Human Rights Orgnaization)
6. ನ್ಯಾಷನಲ್ ವುಮೆನ್ ಫ್ರಂಟ್ (National Women Front)
7. ಜ್ಯೂನಿಯರ್ ಫ್ರಂಟ್ (Junior Front)
8. ಎಂಪವರ್ ಇಂಡಿಯಾ ಫೌಂಡೇಷನ್ (Empower India Foundation)
9. ರೆಹಾಬ್ ಫೌಂಡೇಷನ್, ಕೇರಳ (Rehab Foundation, Kerala)
ಕೇಂದ್ರ ಗೃಹ ಸಚಿವಾಲಯ ಹೊರಡಿಸಿರುವ ಆದೇಶದಲ್ಲಿ ಕರ್ನಾಟಕದಲ್ಲಿ ನಡೆದಿರುವ ಕೊಲೆ ಪ್ರಕರಣಗಳನ್ನು ಉಲ್ಲೇಖಸಿದೆ. ರುದ್ರೇಶ್, ಶರತ್, ಪ್ರವೀಣ್ ಪೂಜಾರಿ ಮತ್ತು ಪ್ರವೀಣ್ ನೆಟ್ಟಾರು ಕೂಲೆ ಪ್ರಕರಣಗಳಲ್ಲಿ PIF ಪಾತ್ರವಿದೆ ಎಂದಿದೆ.
ಭಯೋತ್ಪಾದನೆ ನಿಗ್ರಹಕ್ಕಾಗಿರುವ ರಾಷ್ಟ್ರೀಯ ತನಿಖಾ ದಳ (NIA) 13 ರಾಜ್ಯಗಳು ಮತ್ತು ಎರಡು ಕೇಂದ್ರಾಡಳಿತ ಪ್ರದೇಶದಲ್ಲಿ ಪಿಎಫ್ಐ ವಿರುದ್ಧ ಕಾರ್ಯಾಚರಣೆ ಕೈಗೊಂಡಿತ್ತು. ಪಿಎಫ್ಐಗೆ ಸಂಬಂಧಿಸಿದ್ದ ಖಾತೆಗಳನ್ನು ಜಪ್ತಿ ಮಾಡಿಕೊಳ್ಳಲಾಗಿತ್ತು.
ಭಾರತದಲ್ಲಿ ಭಯೋತ್ಪಾದಕ ಕೃತ್ಯದಲ್ಲಿ ಭಾಗಿ ಆದ ಆರೋಪದಡಿ ಸ್ಟೂಡೆಂಟ್ಸ್ ಇಸ್ಲಾಮಿಕ್ ಮೂಮೆಂಟ್ ಆಫ್ ಇಂಡಿಯಾ (SIMI) ನಿಷೇಧದ ಬಳಿಕ ಹುಟ್ಟುಕೊಂಡಿದ್ದ ಸಂಘಟನೆಯೇ PFI. 2006ರಲ್ಲಿ ಕೇರಳದಲ್ಲಿ ಪಿಎಫ್ಐ ಸಂಘಟನೆ ಹುಟ್ಟಿಕೊಂಡಿತ್ತು. ಆರ್ಥಿಕವಾಗಿ ಮತ್ತು ಸಾಮಾಜಿಕವಾಗಿ ಕಡೆಗಣನೆಗೆ ಒಳಗಾಗಿರುವವರ ಅಭಿವೃದ್ಧಿ ಎಂಬ ಘೋಷಣೆಯೊಂದಿಗೆ ಸೃಷ್ಟಿ ಆದ PFI ಬಳಿಕದ ದಿನಗಳಲ್ಲಿ ಉಗ್ರರ ಕೃತ್ಯಗಳಿಗೆ ನೆರವಾಗುವ ಮೂಲಕ ದೇಶ ವಿರೋಧಿ ಕೃತ್ಯ ಎಸಗುತ್ತಿದೆ ಎಂಬ ಆರೋಪವನ್ನು ಎದುರಿಸಿತು.
ಇತ್ತೀಚೆಗೆ ಕರ್ನಾಟಕದಲ್ಲಿ ಹಿಜಾಬ್ ಪರ ಭುಗಿಲೆದ್ದ ಹೋರಾಟ, ಬೆಳ್ಳಾರೆಯಲ್ಲಿ ಪ್ರವೀಣ್ ನೆಟ್ಟಾರು ಹತ್ಯೆಯಿಂದ ಹಿಡಿದು ದೇಶದ ಹಲವು ರಾಜ್ಯಗಳಲ್ಲಿ ಹಿಂಸಾಚಾರ ಸಂಬಂಧಿತ ಕೃತ್ಯಗಳಲ್ಲಿ ಪಿಎಫ್ಐ ಕೈವಾಡ ಇದ್ದ ಬಗ್ಗೆ ಸಾಕ್ಷ್ಯಗಳು ಸಿಕ್ಕಿವೆ.