2024ರ ಲೋಕಸಭಾ ಚುಣಾವಣೆಗೆ ಬಿಜೆಪಿ ಹೊಸ ಕಾರ್ಯತಂತ್ರ ರೂಪಿಸುತ್ತಿದ್ದು, ಪ್ರಧಾನಿ ಮೋದಿಯವರು ದಕ್ಷಿಣ ಭಾರತದಿಂದ ಸ್ಪರ್ಧೆ ಮಾಡಲಿದ್ದಾರೆ ಅಂತ ಹೇಳಲಾಗ್ತಿದೆ. ತೆಲಂಗಾಣ ವಿಧಾನಸಭಾ ಚುನಾವಣೆ ಫಲಿತಾಂಶದ ಬಳಿಕ ರಾಜಕೀಯ ಚಿತ್ರಣ ಬದಲಾಗಿದ್ದು, ಎಲ್ಲಾ ಪ್ರಮುಖ ರಾಜಕೀಯ ಪಕ್ಷಗಳು ತಮ್ಮ ಪ್ರಾಬಲ್ಯ ಸಾಧಿಸಲು ಕಸರತ್ತು ನಡೆಸ್ತಿವೆ.
ಬಿಜೆಪಿ ತೆಲಂಗಾಣವನ್ನು ತನ್ನ ಭದ್ರಕೋಟೆಯಾಗಿ ಮಾಡಿಕೊಳ್ಳೋ ಮೂಲಕ ದಕ್ಷಿಣ ಭಾರತದಾದ್ಯಂತ ತನ್ನ ಪ್ರಭಾವವನ್ನು ವಿಸ್ತರಿಸುವ ಗುರಿ ಹೊಂದಿದೆ. ಹೊಸ ಕಾರ್ಯತಂತ್ರಗಳ ಸರಣಿಯನ್ನು ಜಾರಿಗೆ ತರಲು ಮುಂದಾಗಿದೆ. ಇದರ ಪ್ರಮುಖ ಭಾಗವಾಗಿ ತೆಲಂಗಾಣದ ಮಲ್ಕಾಜ್ಗಿರಿ ಲೋಕಸಭಾ ಕ್ಷೇತ್ರದಿಂದ ಪ್ರಧಾನಿ ನರೇಂದ್ರ ಮೋದಿ ಅವರನ್ನು ಕಣಕ್ಕಿಳಿಸಲು ಬಿಜೆಪಿ ಚಿಂತನೆ ನಡೆಸಿದೆ ಅಂತ ಮೂಲಗಳು ತಿಳಿಸಿವೆ. ತೆಲಂಗಾಣದಲ್ಲಿ ಮೋದಿಯವರ ಉಮೇದುವಾರಿಕೆ ತಮ್ಮ ಸ್ಥಾನವನ್ನು ಬಲಪಡಿಸುತ್ತದೆ ಅಂತ ಲೆಕ್ಕಾಚಾರ ಹಾಕಿರೋ ಬಿಜೆಪಿ, ನಿಧಾನವಾಗಿ ದಕ್ಷಿಣ ಭಾರತದಲ್ಲಿ ಪಕ್ಷದ ಅಡಿಪಾಯವನ್ನು ಬಲಪಡಿಸೋಕೆ ಮುಂದಾಗಿದೆ. ಸದ್ಯಕ್ಕೆ ದಕ್ಷಿಣ ರಾಜ್ಯಗಳಲ್ಲಿ ಅಸ್ಥಿತ್ವ ಉಳಿಸಿಕೊಳ್ಳದ ಬಿಜೆಪಿ, ದಕ್ಷಿಣಕ್ಕೆ ಪಿಎಂ ಮೋದಿ ಎಂಟ್ರಿ ಕೊಟ್ಟ ನಂತರ ಮತ್ತೆ ಅಧಿಕಾರ ಹಿಡಿಯಬಹುದೆನ್ನೋ ಲೆಕ್ಕಾಚಾರದಲ್ಲಿದೆ. ಇದರಿಂದಾಗಿ ಇತರ ರಾಜಕೀಯ ಬಣಗಳ ನಾಯಕರು, ವಿಶೇಷವಾಗಿ ಬಿಆರ್ಎಸ್ ಪಕ್ಷದಿಂದ ಲೋಕಸಭಾ ಚುನಾವಣೆ ಮುನ್ನವೇ ಬಿಜೆಪಿ ಸೇರಲು ಯೋಚಿಸುತ್ತಿದ್ದಾರೆನ್ನಲಾಗಿದೆ.