ಪ್ರಧಾನ ಮಂತ್ರಿ ಬಡವರ ಕಲ್ಯಾಣ ಅನ್ನ ಯೋಜನೆಯಡಿ ನೀಡಲಾಗುತ್ತಿರುವ ಉಚಿತ ಪಡಿತರವನ್ನು ಪ್ರಧಾನಿ ನರೇಂದ್ರ ಮೋದಿ ಸರ್ಕಾರ ಮತ್ತೆ ಆರು ತಿಂಗಳವರೆಗೆ ವಿಸ್ತರಿಸಿದೆ. ಶನಿವಾರ ಪ್ರಧಾನಿ ಮೋದಿ ನೇತೃತ್ವದಲ್ಲಿ ನಡೆದ ಸಭೆಯಲ್ಲಿ ಉಚಿತ ಪಡಿತರ ಯೋಜನೆಯನ್ನು ಸೆಪ್ಟೆಂಬರ್ 2022ರವರೆಗೂ ವಿಸ್ತರಿಸಲು ತೀರ್ಮಾನಿಸಲಾಯಿತು.
2020ರ ಏಪ್ರಿಲ್ ಅಂದರೆ ಕೋವಿಡ್ ಕಾರಣದಿಂದ ದೇಶಾದ್ಯಂತ ಹೇರಲಾಗಿದ್ದ ಮೊದಲ ಲಾಕ್ಡೌನ್ ವೇಳೆ ಪ್ರಧಾನಮಂತ್ರಿ ಬಡವರ ಕಲ್ಯಾಣ ಅನ್ನ ಯೋಜನೆಯನ್ನು ಸರ್ಕಾರ ಜಾರಿಗೆ ತಂದಿತ್ತು.
ಉತ್ತರಪ್ರದೇಶದ ಚುನಾವಣಾ ರ್ಯಾಲಿಯ ವೇಳೆ ಪ್ರಧಾನಿ ಮೋದಿಯವರು `ನಾನು ಮೋದಿ ಉಪ್ಪು ತಿಂದಿದ್ದೇನೆ’ ಎಂದು ಮಹಿಳೆಯೊಬ್ಬರು ಹೇಳಿದ್ದರು ಎಂದು ಎನ್ನಲಾಗಿದ್ದ ವೀಡಿಯೋದ ಬಗ್ಗೆ ಪ್ರಸ್ತಾಪ ಮಾಡಿದ್ದರು. ಉತ್ತರಪ್ರದೇಶದಲ್ಲಿ ಬಿಜೆಪಿ ಮತ್ತೆ ಅಧಿಕಾರಕ್ಕೆ ಬರುವಲ್ಲಿ ಪ್ರಧಾನಮಂತ್ರಿ ಬಡವರ ಕಲ್ಯಾಣ ಅನ್ನ ಯೋಜನೆಯೂ ಪ್ರಮುಖ ಕಾರಣ ಆಗಿತ್ತು.
ಉತ್ತರಪ್ರದೇಶದಲ್ಲಿ ಎರಡನೇ ಬಾರಿ ಸಿಎಂ ಆದ ಮೊದಲ ಸಂಪುಟ ಸಭೆಯಲ್ಲೂ ಯೋಗಿ ಆದಿತ್ಯನಾಥ್ ಅವರು ಉಚಿತ ಪಡಿತರವನ್ನು ಮತ್ತೆ ಮೂರು ತಿಂಗಳ ಕಾಲ ವಿಸ್ತರಿಸುವ ಘೋಷಣೆ ಮಾಡಿದ್ದಾರೆ.
ಪ್ರಧಾನಮಂತ್ರಿ ಬಡವರ ಕಲ್ಯಾಣ ಅನ್ನ ಯೋಜನೆಯಡಿ ದೇಶದ 80 ಕೋಟಿ ಪಡಿತರ ಚೀಟಿ ಹೊಂದಿರುವವರಿಗೆ ಕುಟುಂಬದ ಒಬ್ಬರಿಗೆ ತಲಾ 5 ಕೆಜಿ ಅಕ್ಕಿ ಅಥವಾ ಗೋಧಿ ಮತ್ತು 1 ಕೆಜಿ ಬೇಳೆಕಾಳನ್ನು ವಿತರಿಸಲಾಗುತ್ತಿದೆ.