ಪ್ರಧಾನಿ ನರೇಂದ್ರ ಮೋದಿ ಇಂದಿನಿಂದ 2 ದಿನ ರಾಜ್ಯ ಪ್ರವಾಸ ಮಾಡಲಿದ್ದಾರೆ. ಪ್ರಧಾನಿಯ ಈ ಎರಡು ದಿನದ ಕಾರ್ಯಕ್ರಮಗಳಲ್ಲಿ ಮಾಜಿ ಸಿಎಂ ಬಿಎಸ್ ಯಡಿಯೂರಪ್ಪ ಹಾಗೂ ಅವರ ಪುತ್ರ ಬಿವೈ ವಿಜಯೇಂದ್ರ ಅವರನ್ನು ಕಡೆಗಣಿಸಲಾಗುತ್ತಿದೆ ಎಂಬ ಮಾತು ಬಿಜೆಪಿ ವಲಯದಿಂದಲೇ ಕೇಳಿಬರುತ್ತಿದೆ.
ಯಡಿಯೂರಪ್ಪ ಹಾಗೂ ವಿಜಯೇಂದ್ರ ಅವರ ಕಡೆಗಣನೆಗೆ ಸಾಕ್ಷಿ ಎಂಬಂತೆ ಪ್ರಧಾನಿಗಳ ಸ್ವಾಗತ ಮತ್ತು ಬೀಳ್ಕೊಡುಗೆ ಕಾರ್ಯಕ್ರಮಗಳಲ್ಲಿ ಬಿಎಸ್ವೈ ಹಾಗೂ ವಿಜಯೇಂದ್ರ ಅವರನ್ನು ಕಡೆಗಣಿಸಲಾಗಿದೆ. ಕೇವಲ ಒಂದು ಕಡೆ ಮಾತ್ರ ಯಡಿಯೂರಪ್ಪಗೆ ಪ್ರಧಾನಿ ಮೋದಿ ಸ್ವಾಗತಕ್ಕೆ ಅವಕಾಶ ನೀಡಲಾಗಿದೆ.
ಪ್ರಧಾನಿಗಳ 2 ದಿನದ ಭೇಟಿಯಲ್ಲಿ ಬಿಜೆಪಿಯ ರಾಜ್ಯ ಉಪಾಧ್ಯಕ್ಷರಾಗಿರುವ ವಿಜಯೇಂದ್ರ ಅವರಿಗೆ ಅವಕಾಶ ನೀಡಲಾಗಿಲ್ಲ. ಪ್ರಧಾನಿ ಇಲಾಖೆಯ ಪಟ್ಟಿಯಲ್ಲಿ ವಿಜಯೇಂದ್ರಗೆ ಸ್ಥಾನ ಇಲ್ಲ. ಬೆಂಗಳೂರು ಕಾರ್ಯಕ್ರಮ ಮತ್ತು ಮೈಸೂರು ಕಾರ್ಯಕ್ರಮಗಳಲ್ಲೂ ವಿಜಯೇಂದ್ರಗೆ ಅವಕಾಶ ಇಲ್ಲದಂತಾಗಿದೆ.
ಮೋದಿ ಭಾಗವಹಿಸುವ ಪ್ರಮುಖ ಕಾರ್ಯಕ್ರಮಗಳಾದ ಕೊಮ್ಮಘಟ್ಟ ಕಾರ್ಯಕ್ರಮ, ಮೈಸೂರು ಸುತ್ತೂರು ಮಠದ ಕಾರ್ಯಕ್ರಮ, ಅರಮನೆ ಕಾರ್ಯಕ್ರಮ ಸೇರಿದಂತೆ ಯಾವುದೇ ಕಾರ್ಯಕ್ರಮಕ್ಕೂ ವಿಜಯೇಂದ್ರರಿಗೆ ಅವಕಾಶ ನೀಡಿಲ್ಲ. ಬಿಎಸ್ ಯಡಿಯೂರಪ್ಪಗೂ ಸ್ವಾಗತ ಕಾರ್ಯಕ್ರಮಕ್ಕೆ ಮಾತ್ರ ಅವಕಾಶ ನೀಡಿದ್ದು ಬಿಟ್ಟರೆ, ಉಳಿದ ಕಡೆ ಯಡಿಯೂರಪ್ಪರನ್ನೂ ಕಡೆಗಣಿಸಲಾಗಿದೆ.
ಅನೇಕ ಕಾರ್ಯಕ್ರಮಗಳಲ್ಲಿ ಪಕ್ಷದ ಪದಾಧಿಕಾರಿಗಳಿಗೆ ಅವಕಾಶ ನೀಡಲಾಗಿದೆ. ಪಕ್ಷದ ಉಪಾಧ್ಯಕ್ಷರು, ಕಾರ್ಯದರ್ಶಿಗಳಿಗೂ ಅವಕಾಶ ನೀಡಲಾಗಿದೆ.ಆದರೆ, ವಿಜಯೇಂದ್ರಗೆ ಒಂದೇ ಒಂದು ಕಡೆಯೂ ಅವಕಾಶ ಇಲ್ಲ.
ಪ್ರಧಾನಿ ಮೋದಿ ಕಾರ್ಯಕ್ರಮಗಳಲ್ಲಿ ಪಧಾದಿಕಾರಿಗಳ ಹಾಜರಾತಿ ಇದ್ದರೂ, ಮಾಜಿ ಸಿಎಂ ಬಿಎಸ್ ಯಡಿಯೂರಪ್ಪ ಹಾಗೂ ವಿಜಯೇಂದ್ರ ಅವರಿಗೆ ಅವಕಾಶ ನೀಡಿಲ್ಲ. ಆ ಮೂಲಕ ಬಿಜೆಪಿ ತಂದೆ-ಪುತ್ರರನ್ನು ಕಡೆಗಣನೆ ಮಾಡುತ್ತಿದೆ ಎಂಬ ಮಾತು ಬಿಜೆಪಿ ವಲಯದಲ್ಲಿಯೇ ಕೇಳಿ ಬರುತ್ತಿದೆ.