ಅಪ್ತಾಪ್ತ ಬಾಲಕಿ ಮೇಲಿನ ಅತ್ಯಾಚಾರ ಪ್ರಕರಣದ ತನಿಖೆಯಲ್ಲಿ ಲೋಪ ಎಸಗಿದ ಪೊಲೀಸರ ತಂಡವೇ ಆರೋಪಿಗಳಿಗೆ ಪರಿಹಾರ ನೀಡುವಂತೆ ಮಂಗಳೂರಿನ ನ್ಯಾಯಾಲಯ ಆದೇಶಿಸಿದೆ.
ತನಿಖೆಯಲ್ಲಾದ ಲೋಪದಿಂದ ಜೈಲು ವಾಸ ಅನುಭವಿಸಿದ ಬಾಲಕಿಯ ತಂದೆಗೆ 4 ಲಕ್ಷ ರೂಪಾಯಿ ಮತ್ತು ಮತ್ತೋರ್ವ ಆರೋಪಿಗೆ 1 ಲಕ್ಷ ರೂಪಾಯಿಯನ್ನು ತನಿಖೆ ನಡೆಸಿದ್ದ ತನಿಖಾಧಿಕಾರಿ ಮತ್ತು ಅವರ ತಂಡ 40 ದಿನಗಳೊಳಗೆ ಪರಿಹಾರ ರೂಪದಲ್ಲಿ ಪಾವತಿಸಬೇಕು ಎಂದು ನ್ಯಾಯಾಲಯ ಆದೇಶಿಸಿದೆ.
ಅಲ್ಲದೇ ತನಿಖೆಯಲ್ಲಿ ಲೋಪ ಎಸಗಿದ ಹಿನ್ನೆಲೆಯಲ್ಲಿ ತನಿಖಾಧಿಕಾರಿ ಮತ್ತು ಅವರ ತಂಡದ ವಿರುದ್ಧ ಇಲಾಖಾ ಕ್ರಮಗಳನ್ನು ಕೈಗೊಳ್ಳುವಂತೆ ಒಳಾಡಳಿತ ಇಲಾಖೆ ಮತ್ತು ಮಂಗಳೂರು ಪೊಲೀಸ್ ಆಯುಕ್ತರಿಗೆ ನ್ಯಾಯಾಲಯ ಸೂಚಿಸಿದೆ.
ಮಂಗಳೂರಿನ ಪೋಕ್ಸೋ ನ್ಯಾಯಾಲಯದ ನ್ಯಾಯಾಧೀಶ ಕೆ ಎಂ ರಾಧಾಕೃಷ್ಣ ಅವರು ಆದೇಶ ನೀಡಿದ್ದಾರೆ.
2021ರಲ್ಲಿ ಅಪ್ರಾಪ್ತ ಬಾಲಕಿ ನೀಡಿದ ದೂರು ಆಧರಿಸಿ ಮಹಿಳಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಅತ್ಯಾಚಾರ ಎಸಗಿ ಬಳಿಕ ಗರ್ಭಪಾತಕ್ಕೆ ಬಲವಂತ ಮಾಡಿದರು ಎಂಬ ಆರೋಪದಡಿ ಕೂಲಿ ಕಾರ್ಮಿಕ ಪ್ರಸಾದ್ ಎಂಬಾತನ ಮೇಲೆ ಎಫ್ಐಆರ್ ದಾಖಲಾಗಿತ್ತು.
ಬಳಿಕ ಆಕೆ ತನ್ನ ಹೇಳಿಕೆಯನ್ನು ವಾಪಸ್ ಪಡೆದು ಸಂದೇಶ್ ಎಂಬಾತ ತನಗೆ ಲೈಂಗಿಕವಾಗಿ ಕಿರುಕುಳ ನೀಡಿದ್ದ ಎಂದು ಆರೋಪಿಸಿದ್ದಳು.
ಇದಾದ ಬಳಿಕ 2022ರ ಡಿಸೆಂಬರ್ನಲ್ಲಿ ಮಹಿಳಾ ಪೊಲೀಸ್ ಠಾಣೆ ಸಬ್ಇನ್ಸ್ಪೆಕ್ಟರ್ ಶ್ರೀಕಲಾ ಎದುರು ಹಾಜರಾದ ಆ ಬಾಲಕಿ ತನ್ನನ್ನು ತನ್ನ ತಂದೆ ಮೂರು ವರ್ಷಗಳಿಂದ ಲೈಂಗಿಕವಾಗಿ ಪೀಡಿಸುತ್ತಿದ್ದಾನೆ ಎಂದು ದೂರಿದ್ದಳು. ಆ ಆರೋಪದಡಿ ಆಕೆಯ ತಂದೆ 54 ವರ್ಷದ ಚಂದ್ರಪ್ಪ ವಿರುದ್ಧ ಎಫ್ಐಆರ್ ದಾಖಲಿಸಲಾಗಿತ್ತು.
ತನಿಖಾಧಿಕಾರಿಯಾಗಿದ್ದ ಪೊಲೀಸ್ ಅಧಿಕಾರಿ ಲೋಕೇಶ್ ಅವರು ಭ್ರೂಣದ ಡಿಎನ್ಎ ವರದಿ ಬರುವುದಕ್ಕೂ ಮೊದಲು ಮೂವರು ಆರೋಪಿಗಳಾಗಿದ್ದ ಪ್ರಸಾದ್, ಸಂದೇಶ್ ಮತ್ತು ರತ್ನಪ್ಪಗೆ ಕ್ಲೀನ್ಚಿಟ್ ನೀಡಿದ್ದರು. ಅಲ್ಲದೇ ಡಿಎನ್ಎ ಪರೀಕ್ಷೆಗಾಗಿ ಆರೋಪಿ ಆಗಿದ್ದ ಸಂದೇಶನ ರಕ್ತದ ಮಾದರಿಯನ್ನು ತನಿಖಾಧಿಕಾರಿಯಾಗಿ ಉದ್ದೇಶಪೂರ್ವಕವಾಗಿ ಸಂಗ್ರಹಿಸಿರಲಿಲ್ಲ ಎಂದು ನ್ಯಾಯಾಲಯ ಆದೇಶದಲ್ಲಿ ಹೇಳಿದೆ.
ವಿಚಾರಣೆ ಮುಗಿಯುವ ವೇಳೆ ನ್ಯಾಯಾಲಯಕ್ಕೆ ಡಿಎನ್ಎ ವರದಿ ಸಲ್ಲಿಕೆಯಾಗಿತ್ತು.
ಅಪ್ರಾಪ್ತ ಬಾಲಕಿಯ ತಿರುಚಿದ ಹೇಳಿಕೆಯನ್ನು ಆಧರಿಸಿ ತನಿಖಾಧಿಕಾರಿ ಬಾಲಕಿಯ ತಂದೆ ವಿರುದ್ಧ ಡಿಎನ್ಎ ವರದಿ ಬರುವುದಕ್ಕೂ ಮೊದಲು ಆರೋಪಪಟ್ಟಿ ಸಲ್ಲಿಸಿದ್ದರು. ಈ ಮೂಲಕ ನಿಜವಾದ ತಪ್ಪಿತಸ್ಥರನ್ನು ರಕ್ಷಿಸುವ ಸಲುವಾಗಿ ತನಿಖಾಧಿಕಾರಿ ಮತ್ತು ಅವರ ತಂಡ ಬಾಲಕಿಯ ತಂದೆಯನ್ನು ಸುಳ್ಳು ಕೇಸ್ನಲ್ಲಿ ಸಿಲುಕಿಸಿತು ಎಂದು ನ್ಯಾಯಾಲಯ ಆದೇಶದಲ್ಲಿ ಹೇಳಿದೆ.
ಬಾಲಕಿಯ ತಂದೆ ಚಂದ್ರಪ್ಪಗೆ ತನಿಖಾಧಿಕಾರಿ ಮತ್ತು ಅವರ ತಂಡ ತಮ್ಮ ಸ್ವಂತ ಖರ್ಚಿನಿಂದ 4 ಲಕ್ಷ ರೂಪಾಯಿ ಪರಿಹಾರ ಮತ್ತು ಮತ್ತೋರ್ವ ಕಾರ್ಮಿಕ ಪ್ರಸಾದ್ಗೆ 1 ಲಕ್ಷ ರೂಪಾಯಿ ಪರಿಹಾರ ಮೊತ್ತ ಪಾವತಿಸುವಂತೆ ನ್ಯಾಯಾಲಯ ಆದೇಶಿಸಿದೆ.
ADVERTISEMENT
ADVERTISEMENT