ಜೂನ್ನಿಂದ ಏರಿಕೆ ಆಗಿರುವ ವಿದ್ಯುತ್ ದರ ಸಂಬಂಧ ಇಂಧನ ಇಲಾಖೆ ಸಾರ್ವಜನಿಕರಿಗೆ ಸ್ಪಷ್ಟೀಕರಣ ಬಿಡುಗಡೆ ಮಾಡಿದೆ.
ವಿಧಾನಸಭಾ ಚುನಾವಣಾ ಫಲಿತಾಂಶ ಪ್ರಕಟವಾಗುವ ಮೊದಲೇ ಮತ್ತು ಹೊಸ ಸರ್ಕಾರ ಅಸ್ತಿತ್ವಕ್ಕೆ ಬರುವ ಮೊದಲೇ ಏಪ್ರಿಲ್ ತಿಂಗಳಿನಿಂದಲೇ ಪೂರ್ವಾನ್ವಯವಾಗುವಂತೆ ದರ ಪರಿಷ್ಕರಣೆಗೆ ಮೇ 12ರಂದು ಕರ್ನಾಟಕ ವಿದ್ಯುಚ್ಛಕ್ತಿ ನಿಯಂತ್ರಣ ಆಯೋಗ ಆದೇಶ ನೀಡಿರುವುದರಿಂದ ಜೂನ್ ತಿಂಗಳಲ್ಲಿ ಎರಡು ತಿಂಗಳ (ಏಪ್ರಿಲ್ ಮತ್ತು ಮೇ) ದರ ಹೆಚ್ಚಳದ ಸೇರಿದ್ದರಿಂದ ಜೂನ್ ತಿಂಗಳ ಬಿಲ್ನಲ್ಲಿ ಹೆಚ್ಚು ಮೊತ್ತ ಬಂದಿದೆ ಎಂದು ಇಂಧನ ಇಲಾಖೆ ಸ್ಪಷ್ಟಪಡಿಸಿದೆ.
ಭಾರತೀಯ ವಿದ್ಯುಚ್ಛಕ್ತಿ ಕಾಯ್ದೆಯ ಅನ್ವಯ ವಿದ್ಯುತ್ ಸರಬರಾಜು ಕಂಪನಿಗಳಿಗೆ ದರವನ್ನು ನಿಗದಿಪಡಿಸಲು ಎಲ್ಲ ರಾಜ್ಯಗಳೂ ವಿದ್ಯುತ್ ನಿಯಂತ್ರಣ ಆಯೋಗ ಸ್ಥಾಪನೆ ಮಾಡಬೇಕು.
ಹಾಗಾಗಿ ರಾಜ್ಯದ ಎಲ್ಲ 5 ವಿದ್ಯುತ್ ಸರಬರಾಜು ಕಂಪನಿಗಳಿಗೆ ವಿದ್ಯುತ್ ದರ ನಿಗದಿಪಡಿಸಲು 2002ರಲ್ಲಿ ಕರ್ನಾಟಕ ವಿದ್ಯುಚ್ಛಕ್ತಿ ಆಯೋಗವನ್ನು ರಚಿಸಲಾಯಿತು.
ಎಲ್ಲ ಎಸ್ಕಾಂಗಳು ತಮ್ಮ ವೆಚ್ಚದ ಮೇಲಿನ ನಿರೀಕ್ಷಿತ ಆದಾಯದ ವಿವರಗಳನ್ನು ಪ್ರತಿ ವರ್ಷ ನವೆಂಬರ್ನಲ್ಲಿ ಆಯೋಗಕ್ಕೆ ಸಲ್ಲಿಸಬೇಕು.
ಇದನ್ನು ಪರಿಶೀಲಿಸಿ ಎಲ್ಲ ಎಸ್ಕಾಂಗಳು ಮತ್ತು ಸಾರ್ವಜನಿಕರ ಅಹವಾಲುಗಳನ್ನು ಆಲಿಸಿ ಆಯೋಗವು ಆರ್ಥಿಕ ವರ್ಷದ ಮಾರ್ಚ್ ಅಂತ್ಯದಲ್ಲಿ ವಿದ್ಯುತ್ ದರವನ್ನು ಏಪ್ರಿಲ್ 1ರಿಂದ ಅನ್ವಯವಾಗುವಂತೆ ದರವನ್ನು ನಿಗದಿಪಡಿಸುತ್ತದೆ.
ಕರ್ನಾಟಕ ವಿಧಾನಸಭಾ ಚುನಾವಣೆ ಘೋಷಣೆ ಹಾಗೂ ಚುನಾವಣೆಗೆ ನೀತಿ ಸಂಹಿತೆ ಜಾರಿಯಾದ ಹಿನ್ನೆಲೆಯಲ್ಲಿ ಈ ವರ್ಷದ ವಿದ್ಯುತ್ ದರ ಪರಿಷ್ಕರಣೆ ಅಧಿಸೂಚನೆಯನ್ನು ಆಯೋಗವು ಮೇ 12ರಂದು ಹೊರಡಿಸಿತು.
ರಾಜ್ಯದಲ್ಲಿ ಹೊಸ ಸರ್ಕಾರ ರಚನೆ ಆಗಿದ್ದು ಮೇ 20ರಂದು. ಅಂದರೆ ವಿದ್ಯುತ್ ದರ ಪರಿಷ್ಕರಣೆ ಅಧಿಸೂಚನೆಯನ್ನು ನೂತನ ಸರ್ಕಾರ ಅಸ್ತಿತ್ವಕ್ಕೆ ಬರುವ ಮುನ್ನವೇ ಘೋಷಿಸಲಾಯಿತು.
ವಿದ್ಯುತ್ ದರ ಪರಿಷ್ಕರಣೆಯು ಜೂನ್ ಬಿಲ್ಲಿಂಗ್ನಿಂದ ಅನ್ವಯವಾಗುವಂತೆ ಜಾರಿಗೆ ಬಂದಿದ್ದು ಈ ಎರಡು ಕಾರಣಗಳಿಂದಾಗಿ ಜೂನ್ ತಿಂಗಳ ವಿದ್ಯುತ್ ಬಿಲ್ನಲ್ಲಿ ವಿದ್ಯುತ್ ಶುಲ್ಕ ಹೆಚ್ಚಾಗಿದೆ.
1) ಎರಡು ತಿಂಗಳ ವಿದ್ಯುತ್ ದರ ಹೆಚ್ಚಳದ ಪರಿಣಾಮ (ಏಪ್ರಿಲ್ ತಿಂಗಳಿಂದ ಪೂರ್ವಾನ್ವಯವಾಗುವಂತೆ ದರ ಪರಿಷ್ಕರಣೆಗೆ ಮೇ 12ರಂದು ಆಯೋಗ ಆದೇಶ ನೀಡಿದ್ದರ ಹಿನ್ನೆಲೆಯಲ್ಲಿ ಏಪ್ರಿಲ್ ಮತ್ತು ಮೇ ತಿಂಗಳ ದರ ಹೆಚ್ಚಳ ಜೂನ್ ತಿಂಗಳ ಬಿಲ್ನಲ್ಲಿ ಒಟ್ಟಿಗೆ ಬಂದಿದೆ)
2) ಮಾರ್ಚ್ ತಿಂಗಳಲ್ಲಿ ಹೆಚ್ಚಿನ ವಿದ್ಯುತ್ ಖರೀದಿ ವೆಚ್ಚ ಪಾವತಿಯ ಪರಿಣಾಮ
ಮುಂದಿನ ತಿಂಗಳಲ್ಲಿ ಬರುವ ವಿದ್ಯುತ್ ಬಿಲ್ ಕಡಿಮೆಯಾಗಬಹುದು ಎಂಬ ನಿರೀಕ್ಷೆ ಹೊಂದಲಾಗಿದೆ
ಎಂದು ಇಂಧನ ಇಲಾಖೆ ವಿವರವಾದ ಸ್ಪಷ್ಟನೆಯನ್ನು ನೀಡಿದೆ.
ADVERTISEMENT
ADVERTISEMENT