ಅಕ್ಷಯ್ ಕುಮಾರ್, ಮುಖ್ಯ ಸಂಪಾದಕರು, ಪ್ರತಿಕ್ಷಣ
ವಿದ್ಯುತ್ ಬೆಲೆ ಏರಿಕೆ ಈಗ ಕರ್ನಾಟಕದಲ್ಲಿ ಆಡಳಿತ ಪಕ್ಷ ಕಾಂಗ್ರೆಸ್ ಮತ್ತು ವಿರೋಧ ಪಕ್ಷ ಭಾರತೀಯ ಜನತಾ ಪಕ್ಷದ ಜೊತೆಗೆ ಸಂಘರ್ಷಕ್ಕೆ ಕಾರಣವಾಗಿದೆ.
ಚುನಾವಣಾ ಫಲಿತಾಂಶ ಬಂದು ಇನ್ನೂ ಒಂದು ತಿಂಗಳಾಗಿಲ್ಲ. ಸಿಎಂ ಸಿದ್ದರಾಮಯ್ಯ ಅವರ ನೇತೃತ್ವದಲ್ಲಿ ಕಾಂಗ್ರೆಸ್ ಸರ್ಕಾರ ಅಧಿಕಾರ ಸ್ವೀಕರಿಸಿಯೂ ಇನ್ನೂ ಒಂದು ತಿಂಗಳಾಗಿಲ್ಲ.
ಜೂನ್ 1ರಿಂದ ವಿದ್ಯುತ್ ದರ ಹೆಚ್ಚಳ ಖಂಡಿಸಿ ಬಿಜೆಪಿ ರಾಜ್ಯದ ಎಲ್ಲೆಡೆ ಪ್ರತಿಭಟನೆ ಕೈಗೊಂಡಿದೆ.
ಹಾಗಾದರೆ ಜೂನ್ 1ರಿಂದ ಜಾರಿಯಾಗಿರುವ ವಿದ್ಯುತ್ ದರ ಹೆಚ್ಚಳ ಯಾರ ಕೂಸು..? ಇದರ ಹಿಂದಿನ ರೂವಾರಿಗಳು ಯಾರು..?
ಕಳೆದ ವರ್ಷವೇ ಮೂರು ಬಾರಿ ಹೆಚ್ಚಳ:
2022ರ ಏಪ್ರಿಲ್ನಿಂದ ಮೇ ಅಂತ್ಯದವರೆಗೆ ಅನ್ವಯವಾಗುವಂತೆ ಕರ್ನಾಟಕದಲ್ಲಿ ವಿದ್ಯುತ್ ದರ ಪ್ರತಿ ಯುನಿಟ್ಗೆ ಸರಾಸರಿ 35 ಪೈಸೆಯಷ್ಟು ಹೆಚ್ಚಳವಾಗಿತ್ತು.
ಅದೇ ವರ್ಷ ಜೂನ್ 1ರಿಂದ ನಿಂದ ಸೆಪ್ಟೆಂಬರ್ 30ರವರೆಗೆ ಅನ್ವಯವಾಗುವಂತೆ 2ನೇ ಬಾರಿಗೆ ಪ್ರತಿ ಯುನಿಟ್ಗೆ ಸರಾಸರಿ 25ರಿಂದ 30 ಪೈಸೆ ಹೆಚ್ಚಳ ಮಾಡಲಾಗಿತ್ತು.
ಇದಾದ ಬಳಿಕ ಕಳೆದ ವರ್ಷವೇ ಅಕ್ಟೋಬರ್ 1ರಿಂದ ಈ ವರ್ಷದ ಅಂದರೆ 2023ರ ಮಾರ್ಚ್ 31ರವರೆಗೆ ಅನ್ವಯವಾಗುವಂತೆ ವಿದ್ಯುತ್ ದರವನ್ನು ಪ್ರತಿ ಯುನಿಟ್ಗೆ 24 ಪೈಸೆಯಿಂದ 43 ಪೈಸೆಯಷ್ಟು ಹೆಚ್ಚಳ ಮಾಡಲಾಗಿತ್ತು.
ಈ ಜೂನ್ ತಿಂಗಳಿಂದ ವಿದ್ಯುತ್ ದರ ಹೆಚ್ಚಳದ ರಹಸ್ಯ:
ವಿದ್ಯುತ್ ದರ ಏರಿಕೆಯನ್ನು ಖಂಡಿಸಿ ಬಿಜೆಪಿ ಈಗ ಬೀದಿಗಿಳಿದು ಪ್ರತಿಭಟನೆ ಮಾಡುತ್ತಿದೆ. ಆದರೆ ಈ ವಿದ್ಯುತ್ ದರ ಹೆಚ್ಚಳವನ್ನು ಖಂಡಿಸಿ ಬಿಜೆಪಿ ಪ್ರತಿಭಟನೆ ಮಾಡುತ್ತಿರುವುದೇ ಸೋಜಿಗ ಎನಿಸುತ್ತಿದೆ.
ಮಾರ್ಚ್ 13ರಂದು ಆದೇಶ:
ಕರ್ನಾಟಕ ವಿದ್ಯುಚ್ಛಕ್ತಿ ನಿಯಂತ್ರಣ ಆಯೋಗ ಇದೇ ವರ್ಷದ ಮಾರ್ಚ್ 13ರಂದು ರಾಜ್ಯದ ಎಲ್ಲ ವಿದ್ಯುತ್ ಸರಬರಾಜು ಕಂಪನಿಗಳಿಗೆ ಎಫ್ಎಫ್ಪಿಸಿಎ (ಇಂಧನ ಮತ್ತು ವಿದ್ಯುತ್ ಖರೀದಿ ದರ ಹೊಂದಾಣಿಕೆ) ಅಡಿಯಲ್ಲಿ ವಿದ್ಯುತ್ ದರ ಹೆಚ್ಚಳ ಮಾಡಿ ಆದೇಶ ಹೊರಡಿಸುತ್ತದೆ.
ಆ ಆದೇಶದಂತೆ ಏಪ್ರಿಲ್ 1ರಿಂದ ಜೂನ್ 30ರವರೆಗೆ ಮೂರು ತಿಂಗಳ ಅವಧಿಗೆ ಆಯೋಗ ವಿದ್ಯುತ್ ದರ ಹೆಚ್ಚಳ ಮಾಡಿತ್ತು.
ಬೆಸ್ಕಾಂ: ಯುನಿಟ್ಗೆ 1 ರೂಪಾಯಿ 1 ಪೈಸೆ
ಮೆಸ್ಕಾಂ: ಯುನಿಟ್ಗೆ 93 ಪೈಸೆ
ಚೆಸ್ಕಾಂ: ಯುನಿಟ್ಗೆ 82 ಪೈಸೆ
ಹೆಸ್ಕಾಂ: ಯುನಿಟ್ಗೆ 1 ರೂಪಾಯಿ
ಜೆಸ್ಕಾಂ: ಯುನಿಟ್ಗೆ 67 ಪೈಸೆ
ಆರು ತಿಂಗಳವರೆಗೆ ವಿಸ್ತರಣೆಗೆ ಮನವಿ:
ಈ ಆದೇಶದ ಬಳಿಕ ಬೆಂಗಳೂರು ಮಹಾನಗರ ವಿದ್ಯುತ್ ಸರಬರಾಜು ಕಂಪನಿ (ಬೆಸ್ಕಾಂ) ಎಫ್ಪಿಪಿಸಿಎ ಅಡಿಯಲ್ಲಿ ವಿದ್ಯುತ್ ದರ ಹೆಚ್ಚಳವನ್ನು ಇದೇ ವರ್ಷದ ಜುಲೈ 1ರಿಂದ ಡಿಸೆಂಬರ್ 30ರವರೆಗೆ ಅಂದರೆ 1ಆರು ತಿಂಗಳವರೆಗೆ ವಿಸ್ತರಣೆ ಮಾಡುವಂತೆ ಮನವಿ ಮಾಡಿತ್ತು.
ಆರು ತಿಂಗಳ ವಿಸ್ತರಣೆಗೆ ಬೆಸ್ಕಾಂ ಕೊಟ್ಟ ಕಾರಣಗಳು:
1) ಬಿಲ್ಲಿಂಗ್ ಕಾರಣದಿಂದ ಜನವರಿಯಲ್ಲಿ ವಸೂಲಿ ಮಾಡಬೇಕಿದ್ದ ಎಫ್ಪಿಪಿಸಿಎ ಮೊತ್ತವನ್ನು ಮಾರ್ಚ್ ತಿಂಗಳಲ್ಲಿ ವಸೂಲಿ ಮಾಡಲು ಸಾಧ್ಯವಾಗಿಲ್ಲ. ಜೊತೆಗೆ ದರ ಹೆಚ್ಚಳದ ಆಯೋಗದ ಆದೇಶದ ಜಾರಿಗೆ ಸಮಯವಾಕಾಶ ಸಾಕಾಗಲಿಲ್ಲ.
2) ಹೀಗಾಗಿ ಪ್ರತಿ ಯುನಿಟ್ಗೆ 1 ರೂಪಾಯಿ 49 ಪೈಸೆಯಷ್ಟು ಎಫ್ಪಿಪಿಸಿಎ ಮೊತ್ತವನ್ನು ಜೂನ್ ತಿಂಗಳಲ್ಲಿ ಸಂಗ್ರಹಿಸಲು ಅನುಮತಿ ನೀಡಬೇಕು ಮತ್ತು 1 ರೂಪಾಯಿ 81 ಪೈಸೆಯನ್ನು ಜುಲೈನಲ್ಲಿ ಸಂಗ್ರಹಿಸಲು ಅನುಮತಿ ನೀಡಬೇಕು.
3) ವಿದ್ಯುಚ್ಛಕ್ತಿ ಆಯೋಗ ಮೇ 12ರಂದು ಹೊರಡಿಸಿದ ಆದೇಶದ ಪ್ರಕಾರ ಜೂನ್ನಿಂದ ಪ್ರತಿ ತಿಂಗಳಿಗೆ ಹೆಚ್ಚಳವಾಗಿರುವ 70 ಪೈಸೆಯನ್ನು ಜೂನ್ ತಿಂಗಳಲ್ಲೂ ಮತ್ತು ಏಪ್ರಿಲ್ನಲ್ಲಿ ವಸೂಲಿ ಆಗದೇ ಬಾಕಿ ಉಳಿದಿರುವ 70 ಪೈಸೆಯನ್ನೂ ಜೂನ್ ತಿಂಗಳಲ್ಲೇ ವಸೂಲಿಗೆ ಅವಕಾಶ ನೀಡಬೇಕು.
4) ಹೀಗಾಗಿ ಜೂನ್ ತಿಂಗಳಲ್ಲಿ ವಿದ್ಯುತ್ ದರ ಪ್ರತಿ ಯುನಿಟ್ಗೆ 2 ರೂಪಾಯಿ 89 ಪೈಸೆಯಷ್ಟು ಹೆಚ್ಚಳ ಆಗಲಿದೆ.
ಹೊಸ ಆದೇಶ
ಈ ಎಲ್ಲ ಅಂಶಗಳನ್ನು ಅಧರಿಸಿ ಇದೇ ತಿಂಗಳು ಅಂದರೆ ಜೂನ್ 2ರಂದು ವಿದ್ಯುಚ್ಛಕ್ತಿ ಆಯೋಗ ಮಾರ್ಚ್ 13ರಂದು ತಾನೇ ಹೊರಡಿಸಿದ್ದ ಆದೇಶವನ್ನು ಮಾರ್ಪಡಿಸಿ ಹೊಸ ಆದೇಶವನ್ನು ನೀಡಿತು.
ಆ ಆದೇಶದ ಪ್ರಕಾರ ಮೂರನೇ ತ್ರೈಮಾಸಿಕ ಬಿಲ್ಲಿಂಗ್ ಅವಧಿ ಅಂದರೆ ಏಪ್ರಿಲ್ನಿಂದ ಜೂನ್ವರೆಗಿನ ಎಫ್ಪಿಪಿಸಿಎ ಮೊತ್ತವನ್ನು ಜುಲೈ 1ರಿಂದ ಡಿಸೆಂಬರ್ 30ರವರೆಗಿನ ಬಿಲ್ಲಿಂಗ್ನಲ್ಲಿ ವಸೂಲಿ ಮಾಡಲು ಎಸ್ಕಾಂಗಳಿಗೆ ಅನುಮತಿ ನೀಡಿತು.
ಬಿಜೆಪಿ ಸರ್ಕಾರದ ಅವಧಿಯಲ್ಲೇ ಹೆಚ್ಚಳ:
ಜೂನ್ 2ರಂದು ವಿದ್ಯುಚ್ಛಕ್ತಿ ಆಯೋಗದ ಆದೇಶವನ್ನು ಗಮನಿಸಿದರೆ ಮಾರ್ಚ್ 13ರಂದೇ (ಆಗ ಸಿಎಂ ಬೊಮ್ಮಾಯಿ ಸರ್ಕಾರ ಅಸ್ತಿತ್ವದಲ್ಲಿತ್ತು, ಚುನಾವಣೆ ಘೋಷಣೆ ಆಗಿರಲಿಲ್ಲ) ಏಪ್ರಿಲ್ನಿಂದ ಜೂನ್ ಅಂತ್ಯದವರೆಗೆ ಅನ್ವಯವಾಗುವಂತೆ ದರ ಹೆಚ್ಚಳ ಮಾಡಿ ಆದೇಶ ಹೊರಡಿಸಿತ್ತು.
ಆದರೆ ಎಸ್ಕಾಂಗಳು ಬಿಲ್ಲಿಂಗ್ ಸಮಸ್ಯೆಯಿಂದ ಎಫ್ಪಿಪಿಸಿಎ ಮೊತ್ತವನ್ನು ಸಂಗ್ರಹಿಸುವುದನ್ನು ವಿಳಂಬ ಮಾಡಿದವು.
ಫಲಿತಾಂಶದ ಹಿಂದಿನ ದಿನವೇ ಆದೇಶ:
ವಿದ್ಯುತ್ ದರವನ್ನು ಯುನಿಟ್ಗೆ 70 ಪೈಸೆಯಂತೆ ಹೆಚ್ಚಳ ಮಾಡಿ ವಿದ್ಯುಚ್ಛಕ್ತಿ ಆಯೋಗ ಹೊಸ ಆದೇಶ ಹೊರಡಿಸಿದ್ದು ಮೇ 12ರಂದು ಅಂದರೆ ವಿಧಾನಸಭಾ ಚುನಾವಣಾ ಫಲಿತಾಂಶದ ಹಿಂದಿನ ದಿನ. ಅಂದರೆ ಇದರಲ್ಲಿ ಈಗಿರುವ ಕಾಂಗ್ರೆಸ್ ಸರ್ಕಾರದ ಪಾಲಿಲ್ಲ ಎನ್ನುವುದು ಸ್ಪಷ್ಟ.
ಒಟ್ಟು ನಾಲ್ಕು ಬಾರಿ ಹೆಚ್ಚಳ:
ಕಳೆದ ಆರ್ಥಿಕ ವರ್ಷದಲ್ಲಾಗಿರುವ ವಿದ್ಯುತ್ ದರ ಹೆಚ್ಚಳ ಮತ್ತು ಈ ವರ್ಷದ ಏಪ್ರಿಲ್ನಿಂದ ಆಗಿರುವ ದರ ಹೆಚ್ಚಳದೊಂದಿಗೆ 1 ವರ್ಷದ ಅವಧಿಯಲ್ಲೇ ವಿದ್ಯುತ್ ದರ 4 ಬಾರಿ ಹೆಚ್ಚಳವಾಗಿದೆ.
ದರ ಹೆಚ್ಚಳ ಅನಿವಾರ್ಯ:
ಇದೇ ವರ್ಷದ ಜನವರಿ 22ರಂದು ವಿದ್ಯುತ್ ದರ ಹೆಚ್ಚಳದ ಬಗ್ಗೆ ಪ್ರತಿಕ್ರಿಯೆ ನೀಡಿದ್ದ ಆಗ ಇಂಧನ ಸಚಿವರಾಗಿದ್ದ ವಿ ಸುನಿಲ್ ಕುಮಾರ್ ಅವರು ವಿದ್ಯುತ್ ದರ ಹೆಚ್ಚಳವನ್ನು ಸಮರ್ಥಿಸಿಕೊಂಡಿದ್ದರು. ಕಲ್ಲಿದ್ದಲು ಬೆಲೆ ಹೆಚ್ಚಳದಿಂದ ದರ ಹೆಚ್ಚಳ ಅನಿವಾರ್ಯವಾಗಿದೆ ಎಂದಿದ್ದರು.
16 ಸಾವಿರ ಕೋಟಿ ರೂಪಾಯಿ ಬಾಕಿ:
ಇದರ ಜೊತೆಗೆ ಜನವರಿ 22ರಂದು ಸಚಿವರಾಗಿದ್ದ ಸುನಿಲ್ ಕುಮಾರ್ ಅವರೇ ಕೊಟ್ಟ ಅಂಕಿಅಂಶದ ಪ್ರಕಾರದ ಸರ್ಕಾರದ ವಿವಿಧ ಇಲಾಖೆಗಳಿಂದ ಎಸ್ಕಾಂಗಳಿಗೆ ಬರೋಬ್ಬರೀ 16 ಸಾವಿರ ಕೋಟಿ ರೂಪಾಯಿ ಬಾಕಿ ಇದೆ ಎಂದು ಮಾಹಿತಿ ನೀಡಿದ್ದರು.
ಸಿದ್ದರಾಮಯ್ಯ ಸರ್ಕಾರದ ಮಾಡಬೇಕಾಗಿರುವುದು:
ಬಿಜೆಪಿ ಸರ್ಕಾರದ ಅವಧಿಯಲ್ಲಿ ವಿದ್ಯುತ್ ದರ ಹೆಚ್ಚಳವಾದಾಗ ಅದನ್ನು ನೇರವಾಗಿ ಖಂಡಿಸಿದವರು ಈಗ ಮುಖ್ಯಮಂತ್ರಿಯಾಗಿರುವ ಸಿದ್ದರಾಮಯ್ಯ ಅವರು.
ವಿದ್ಯುತ್ ದರ ಹೆಚ್ಚಳದ ಬವಣೆಯಿಂದ ಜನಸಾಮಾನ್ಯನ್ನು ಪಾರು ಮಾಡುವ ಸಲುವಾಗಿ ಗೃಹಜ್ಯೋತಿ ಯೋಜನೆಯಡಿ ಉಚಿತ ವಿದ್ಯುತ್ ನೀಡುವ ಯೋಜನೆ ಜುಲೈ 1ರಿಂದ ಅನುಷ್ಠಾನವಾಗಲಿದೆ.
ಆದರೆ ಕೇವಲ 1 ವರ್ಷದೊಳಗೆ 4 ಬಾರಿ ಆಗಿರುವ ವಿದ್ಯುತ್ ಬೆಲೆ ಏರಿಕೆ ಉದ್ಯಮಗಳ ಮತ್ತು ರೈತರ ಮೇಲೆ ನೇರ ಪರಿಣಾಮ ಬೀರಲಿದೆ. ಹೀಗಾಗಿ ಉದ್ಯೋಗ ಸೃಷ್ಟಿ ಮತ್ತು ಆರ್ಥಿಕತೆಯ ಬೆನ್ನುಲುಬಾಗಿರುವ ಕೃಷಿ ಮತ್ತು ಕೈಗಾರಿಕಾ ಕ್ಷೇತ್ರಗಳಿಗೆ ವಿದ್ಯುತ್ ಬೆಲೆ ಹೆಚ್ಚಳದ ಹೊಡೆತದಿಂದ ಪಾರಾಗುವ ರಕ್ಷಣೆ ನೀಡುವುದು ಸರ್ಕಾರದ ಹೊಣೆಗಾರಿಕೆ.
ADVERTISEMENT
ADVERTISEMENT