ಪ್ರತಿಭಾನ್ವಿತ ನಾಯಕ ನಟ ಪ್ರಮೋದ್ ನಟನೆಯ ಬಾಂಡ್ ರವಿ ಸಿನಿಮಾದ ಡಬ್ಬಿಂಗ್ ಕಂಪ್ಲೀಟ್ ಆಗಿದ್ದು, ಶೀಘ್ರದಲ್ಲಿ ಚಿತ್ರ ತೆರೆಗೆ ಬರಲಿದೆ. ಹನ್ನೊಂದು ವರ್ಷಗಳಿಂದ ನಿರ್ದೇಶನ ವಿಭಾಗದಲ್ಲಿ ಕೆಲಸ ಮಾಡಿರುವ ಪ್ರಜ್ವಲ್ ಎಸ್.ಪಿ. ಸಿನಿಮಾಗೆ ಆಕ್ಷನ್ ಕಟ್ ಹೇಳಿದ್ದು, ಇದೊಂದು ಆಕ್ಷನ್ ಲವ್ ಸ್ಟೋರಿ ಸಿನಿಮಾವಾಗಿದೆ.
ಈ ಹಿಂದೆ ಮಾದ ಮಾನಸಿ ಸಿನಿಮಾ ನಿರ್ಮಾಣ ಮಾಡಿದ್ದ ನರಸಿಂಹಮೂರ್ತಿ ಲೈಫ್ ಲೈನ್ ಫಿಲ್ಮ್ಸ್ ಬ್ಯಾನರ್ನ ಅಡಿ ಬಾಂಡ್ ರವಿ ಸಿನಿಮಾಗೆ ಬಂಡವಾಳ ಹೂಡಿದ್ದು, ಮಲ್ಲಿಕಾರ್ಜುನ್ ಕಾಶಿ ಹಾಗೂ ಝೇವಿಯರ್ ಫರ್ನಾಂಡಿಸ್ ಸಹ ನಿರ್ಮಾಪಕರ ಜವಾಬ್ದಾರಿ ಹೊತ್ತುಕೊಂಡಿದ್ದಾರೆ. ಅಪ್ಪು ಅಭಿಮಾನಿಯಾಗಿ ಬಾಂಡ್ ರವಿಯಾಗಿ ನಟಿಸಿರುವ ಪ್ರಮೋದ್ ಗೆ ಜೋಡಿಯಾಗಿ ಕಾಜಲ್ ಕುಂದರ್ ಕಾಣಿಸಿಕೊಂಡಿದ್ದಾರೆ.
ಬೆಂಗಳೂರು, ಶಿವಮೊಗ್ಗ, ಕೊಡಚಾದ್ರಿ, ಕುದುರೆಮುಖ, ಉಡುಪಿ ಮಂಗಳೂರು ಭಾಗದಲ್ಲಿ ಸುಮಾರು 50 ದಿನಗಳ ಕಾಲ ಚಿತ್ರೀಕರಣ ಮಾಡಲಾಗಿದ್ದು, ರವಿಕಾಳೆ, ಧರ್ಮ, ವಿಜಯ್ ಚೆಂಡೂರ್, ಶೋಭರಾಜ್ ಮುಖ್ಯ ಭೂಮಿಕೆಯಲ್ಲಿದ್ದಾರೆ. ಕೆ.ಎಸ್. ಚಂದ್ರಶೇಖರ್ ಛಾಯಾಗ್ರಹಣ, ಅರ್ಜುನ್ ಕಿಟ್ಟು ಸಂಕಲನ, ಸುನಿಲ್ ಮತ್ತು ದೇವ್ ಎನ್. ರಾಜ್ ಸಂಭಾಷಣೆ, ಮನೋಮೂರ್ತಿ ಸಂಗೀತ ಸಿನಿಮಾಕ್ಕಿದೆ. ಜಯಂತ್ ಕಾಯ್ಕಿಣಿ ನಾಗೇಂದ್ರ ಪ್ರಸಾದ್ ಸಾಹಿತ್ಯ ಬರೆದಿದ್ದಾರೆ.