ಪ್ರವೀಣ್ ನೆಟ್ಟಾರು ಅವರ ಕುಟುಂಬಕ್ಕೆ ಬಿಜೆಪಿಯಿಂದ ಪ್ರತ್ಯೇಕವಾಗಿ ಹಣ ಸಂಗ್ರಹ ಮಾಡುತ್ತಿಲ್ಲ. ಬಿಜೆಪಿ ಹೆಸರಿನಲ್ಲಿ ಯಾರೇ ಧನಸಹಾಯದ ಹೆಸರಿನಲ್ಲಿ ಹಣ ಕೇಳಿದರೆ ನೀಡಬೇಡಿ ಎಂದು ರಾಜ್ಯ ಬಿಜೆಪಿ ಸ್ಪಷ್ಟನೆ ನೀಡಿದೆ.
ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ಳಾರೆಯ ಬಿಜೆಪಿ ಯುವ ಕರ್ಯಕರ್ತನಾಗಿದ್ದ ಪ್ರವಿಣ್ ನೆಟ್ಟಾರು ಅವರ ಹತ್ಯೆ ಬುಧವಾರ ರಾತ್ರಿ ನಡೆದಿದೆ. ಈಗಾಗಲೇ ಈ ಹತ್ಯೆ ಸಂಬಂಧಿಸಿದಂತೆ ಇಬ್ಬರನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಕೇರಳಕ್ಕೆ ಹೋಗಿರುವ ಆರೋಪಿಗಳ ಬಂಧನಕ್ಕಾಗಿ ಪೊಲೀಸರು ಬಲೆ ಬೀಸಿದ್ದಾರೆ.
ಪ್ರವೀಣ ಹತ್ಯೆಯ ಬೆನ್ನಲ್ಲೇ ಬಿಜೆಪಿ ಕಾರ್ಯಕರ್ತರು ತಮ್ಮದೇ ಪಕ್ಷದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದರು. ಆ ಬೆನ್ನಲ್ಲೇ, ಎಚ್ಚೆತ್ತ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿಯವರು ಪ್ರವೀಣ್ ಕುಟುಂಬವನ್ನು ಭೇಟಿ ಮಾಡಿದ್ದರು. ಸರ್ಕಾರದಿಂದ 25 ಲಕ್ಷ ಹಾಗೂ ಪಕ್ಷದ ವತಿಯಿಂದ 25 ಲಕ್ಷ ರೂ.ಗಳ ಹಣದ ಚೆಕ್ ಅನ್ನು ಕುಟುಂಬಕ್ಕೆ ಹಸ್ತಾಂತರಿಸಿದ್ದರು.
ಇದನ್ನೂ ಓದಿ : ಅಕ್ರಮ ಆರೋಪ : ರೋಹಿಣಿ ಸಿಂಧೂರಿಗೆ ನೋಟಿಸ್ ಜಾರಿ – Pratikshana News
ಆದರೆ, ಪ್ರವೀಣ್ ಕುಟುಂಬಕ್ಕೆ ಹಣದ ನೆರವು ನೀಡುತ್ತೇವೆ ಎಂದು ಹೇಳಿ ಬಿಜೆಪಿ ಹೆಸರಲ್ಲಿ ಹಣ ವಸೂಲು ಮಾಡಲಾಗುತ್ತದೆ ಎಂದು ಚಕ್ರವರ್ತಿ ಸೂಲಿಬೆಲೆ ಆರೋಪಿಸಿದ್ದರು. ಈ ಬೆನ್ನಲ್ಲೇ, ಎಚ್ಚೆತ್ತಿರುವ ಬಿಜೆಪಿ ಪತ್ರಿಕಾ ಪ್ರಕಟಣೆ ಹೊರಡಿಸಿದೆ.
ಬಿಜೆಪಿ ಕಾರ್ಯಕರ್ತ ಪ್ರವೀಣ್ ನೆಟ್ಟಾರು ಕುಟುಂಬಕ್ಕೆ ಸಹಾಯ ಮಾಡುತ್ತಿದ್ದೇವೆ ಎಂದು ಪಕ್ಷದ ಹೆಸರು ಬಳಸಿಕೊಂಡು ಹಣ ಸಂಗ್ರಹ ಮಾಡುತ್ತಿರುವ ವಿಚಾರ ಪಕ್ಷದ ಗಮನಕ್ಕೆ ಬಂದಿದ್ದು, ಯಾರೂ ಕೂಡಾ ಇದಕ್ಕೆ ಆಸ್ಪದ ನೀಡಬೇಡಿ. ಬಿಜೆಪಿ ಪಕ್ಷ ಈಗಾಗಲೇ ಪ್ರವೀಣ್ ಅವರ ಕುಟುಂಬಕ್ಕೆ ಪ್ರಾಥಮಿಕ ಹಂತದ ಸಹಾಯ ಮಾಡಿದ್ದು ಮುಂದೆಯೂ ಕುಟುಂಬದ ಜೊತೆ ನಿಲ್ಲಲಿದೆ ಎಂದು ಹೇಳಿದೆ.
ಗುರುವಾರ ಸಾಯಂಕಾಲ ಮಂಗಳೂರು ಹೊರ ವಲಯದ ಸುರತ್ಕಲ್ನಲ್ಲಿ ಮುಸ್ಲಿಂ ಯುವಕ ಫಾಝಿಲ್ ಮೇಲೆ ಮುಸುಕುಧಾರಿಗಳು ದಾಳಿ ಮಾಡಿ ಹತ್ಯೆ ಮಾಡಿದ್ದಾರೆ. ಇದನ್ನೂ, ಕೋಮುಹಿಂಸೆ ಎಂದು ಪರಿಗಣಿಸಿ ಫಾಝಿಲ್ ಕುಟುಂಬಕ್ಕೆ ಆರ್ಥಿಕ ನೆರವು ನೀಡಬೇಕು ಎಂದು ಹಲವು ಜನ ಆಗ್ರಹಿಸುತ್ತಿದ್ದಾರೆ.