ದೇಶದ ಮೊದಲ ಪ್ರಜೆ ರಾಷ್ಟ್ರಪತಿ ಚುನಾವಣೆಗೆ ಚುನಾವಣೆ ಘೋಷಣೆ ಆಗಿದೆ. ಜುಲೈ 18ರಂದು ಮತದಾನ ನಡೆಯಲಿದೆ. ಜುಲೈ 21ರಂದು ಅಂದರೆ ಈಗಿನ ರಾಷ್ಟ್ರಪತಿ ರಾಮನಾಥ್ ಕೋವಿಂದ್ ಅವರ ಅವಧಿ ಮುಗಿಯುವುದಕ್ಕೂ ಮೂರು ದಿನ ಮೊದಲು (ಜುಲೈ 24 ರಂದು) ದೇಶದ ಹೊಸ ರಾಷ್ಟ್ರಪತಿ ಯಾರೆಂಬುದು ಘೋಷಣೆ ಆಗಲಿದೆ.
ರಾಷ್ಟ್ರಪತಿ ಚುನಾವಣೆಯಲ್ಲಿ ಲೋಕಸಭಾ ಮತ್ತು ರಾಜ್ಯಸಭಾ ಸಂಸದರು ಹಾಗೂ ರಾಜ್ಯಗಳ ವಿಧಾನಸಭೆಗಳ ಶಾಸಕರು ಮಾತ್ರ ಮತದಾನ ಮಾಡಬಹುದು. ಲೋಕಸಭೆ ಅಥವಾ ರಾಜ್ಯಸಭೆ ಅಥವಾ ವಿಧಾನಸಭೆಗೆ ನಾಮನಿರ್ದೇಶನಗೊಂಡ ಸಂಸದರು ಅಥವಾ ಶಾಸಕರಿಗೆ ಮತದಾನದ ಹಕ್ಕಿರಲ್ಲ. ವಿಧಾನಪರಿಷತ್ ಸದಸ್ಯರಿಗೂ ಮತದಾನದ ಹಕ್ಕಿಲ್ಲ.
ಒಬ್ಬ ಲೋಕಸಭಾ ಅಥವಾ ರಾಜ್ಯಸಭೆಯ ಸಂಸದರ 1 ಮತದ ಮೌಲ್ಯ: 700. ಅಂದರೆ ಲೋಕಸಭೆಯ 543 ಸಂಸದರ ಮತಗಳ ಒಟ್ಟು ಮೌಲ್ಯ: 3,80,100. ರಾಜ್ಯಸಭೆಯ 233 ಸಂಸದರ ಮತಗಳ ಮೌಲ್ಯ: 1,63,100
ಶಾಸಕರ ಮತ ಮೌಲ್ಯ:
ವಿಶೇಷ ಎಂದರೆ ರಾಷ್ಟ್ರಪತಿ ಚುನಾವಣೆಯಲ್ಲಿ 1971ರಲ್ಲಿ ನಡೆಸಲಾದ ಜನಗಣತಿಯಲ್ಲಿನ ಜನಸಂಖ್ಯೆ ಆಧರಿಸಿ ರಾಜ್ಯಗಳ ಶಾಸಕರ ಮತಗಳ ಮೌಲ್ಯವನ್ನು ಲೆಕ್ಕ ಹಾಕಲಾಗುತ್ತದೆ. ಭಾರತದಲ್ಲಿ 2001ರ ಜನಗಣತಿ ಪ್ರಕಾರ ಜನಸಂಖ್ಯೆ 107 ಕೋಟಿ ಇತ್ತು. ಈಗ 139 ಕೋಟಿ ಇದೆ ( 2021ರಲ್ಲಿ ಕೋವಿಡ್ ಕಾರಣದಿಂದ ತಡವಾಗಿ ಜನಗಣತಿ ನಡೆಯುತ್ತಿದೆ.) 2001ರಲ್ಲಿ ತರಲಾದ ತಿದ್ದುಪಡಿ ಪ್ರಕಾರ 2026 ರ ಬಳಿಕ ನಡೆಸಲಾಗುವ ಜನಗಣತಿಯ ಅಂಕಿಅಂಶ ಲಭ್ಯ ಆಗುವವರೆಗೂ 1971ರ ಜನಗಣತಿಯಲ್ಲಿನ ಜನಸಂಖ್ಯೆ ಆಧರಿಸಿಯೇ ರಾಷ್ಟ್ರಪತಿ ಮತ್ತು ಉಪ ರಾಷ್ಟ್ರಪತಿ ಚುನಾವಣೆಗೆ ಮತ ಮೌಲ್ಯ ಲೆಕ್ಕ ಹಾಕಲಾಗುತ್ತದೆ. ಅಂದರೆ 1971ರಲ್ಲಿದ್ದ ಭಾರತದ ಜನಸಂಖ್ಯೆ 54 ಕೋಟಿ 30 ಲಕ್ಷದ 02 ಸಾವಿರದ 005..! (2001ರಲ್ಲಿ ಜನಗಣತಿ ಪ್ರಕಾರ 107 ಕೋಟಿ..!)
ಉದಾಹರಣೆಗೆ ಕರ್ನಾಟಕದ ಶಾಸಕರ ಮತ ಮೌಲ್ಯ:
1971ರ ಜನಗಣತಿ ಪ್ರಕಾರ ಕರ್ನಾಟಕದ ಜನಸಂಖ್ಯೆ: 2,92,99,014. ಶಾಸಕರ ಸಂಖ್ಯೆ: 224.
ಶಾಸಕರ ಸಂಖ್ಯೆಗೆ 1000ವನ್ನು ಗುಣಿಸಿ ಅದನ್ನು ಜನಸಂಖ್ಯೆಗೆ ಭಾಗಿಸಿದಾಗ ಸಿಗುವ ಒಬ್ಬ ಶಾಸಕರ ಮತ ಮೌಲ್ಯ: 130.7 ಅಂದರೆ 131.
ಕರ್ನಾಟಕದಲ್ಲಿ ರಾಷ್ಟ್ರಪತಿ ಚುನಾವಣೆಯಲ್ಲಿ ಪಕ್ಷವಾರು ಬಲಾಬಲ:
ಲೋಕಸಭಾ ಸಂಸದರು:
ಬಿಜೆಪಿ ಸಂಸದರು: 25 * ಒಬ್ಬ ಸಂಸದರ ಮತಮೌಲ್ಯ 700 = 17,500 ಮತಮೌಲ್ಯ
ಕಾಂಗ್ರೆಸ್ ಸಂಸದರು: 1 * ಒಬ್ಬ ಸಂಸದರ ಮತ ಮೌಲ್ಯ 700 = 700 ಮತ ಮೌಲ್ಯ
ಜೆಡಿಎಸ್ ಸಂಸದರು: 1 * ಒಬ್ಬ ಸಂಸದರ ಮತ ಮೌಲ್ಯ 700 = 700 ಮತ ಮೌಲ್ಯ
ಪಕ್ಷೇತರ ಸಂಸದರು: 1 * ಒಬ್ಬ ಸಂಸದರ ಮತ ಮೌಲ್ಯ 700 = 700 ಮತ ಮೌಲ್ಯ (ಸುಮಲತಾ ಅವರು ರಾಷ್ಟ್ರಪತಿ ಚುನಾವಣೆಯಲ್ಲಿ ಬಿಜೆಪಿ ಬೆಂಬಲಿಸಬಹುದು)
ವಿಧಾನಸಭಾ ಸದಸ್ಯರು:
ರಾಷ್ಟ್ರಪತಿ ಚುನಾವಣೆಯಲ್ಲಿ ಕರ್ನಾಟಕದ ಒಬ್ಬ ಶಾಸಕರ ಮತ ಮೌಲ್ಯ 131. ಒಟ್ಟು 224 ಶಾಸಕರ ಮತ ಮೌಲ್ಯ: 29,344
ಬಿಜೆಪಿ : 120 ಶಾಸಕರು – ಮತ ಮೌಲ್ಯ = 15,720
ಕಾಂಗ್ರೆಸ್: 69 ಶಾಸಕರು – ಮತ ಮೌಲ್ಯ = 9,039
ಜೆಡಿಎಸ್: 32 ಶಾಸಕರು – ಮತ ಮೌಲ್ಯ = 4,192
ಬಿಎಸ್ಪಿ : 1 ಶಾಸಕರು – ಮತ ಮೌಲ್ಯ = 131
ಪಕ್ಷೇತರರು: 2 ಶಾಸಕರು – ಮತ ಮೌಲ್ಯ = 262