ಮಹಾರಾಷ್ಟ್ರ ಮಾದರಿಯಲ್ಲಿಯೇ ಜಾರ್ಖಂಡ್ ನಲ್ಲಿ ಕೂಡ ಆಪರೇಷನ್ ಕಮಲಕ್ಕೆ ವೇದಿಕೆ ಸಿದ್ದವಾಗುತ್ತಿರುವಂತೆ ಕಾಣುತ್ತಿದೆ. JMM-ಕಾಂಗ್ರೆಸ್-RJD ಮೈತ್ರಿ ಸರ್ಕಾರದ ಸಮಯ ಮುಗಿಯುತ್ತಿದೆಯಾ? ಶೀಘ್ರವೇ JMM-BJP ಮೈತ್ರಿ ಸರ್ಕಾರ ರಚನೆ ಆಗಲಿದೆಯಾ? ಎಂಬ ಪ್ರಶ್ನೆ ಕಾರಣ ಆಗಿರುವುದು ರಾಷ್ಟ್ರಪತಿ ಚುನಾವಣೆಯಲ್ಲಿ JMM ತೆಗೆದುಕೊಂಡು ನಿರ್ಧಾರ. ಮೊದಲಿಗೆ ವಿಪಕ್ಷಗಳ ರಾಷ್ಟ್ರಪತಿ ಅಭ್ಯರ್ಥಿ ಯಶವಂತ ಸಿನ್ಹಾ ಅವರಿಗೆ ಬೆಂಬಲ ಸೂಚಿಸಿದ್ದ JMM ಕಡೆ ಕ್ಷಣದಲ್ಲಿ NDA ಅಭ್ಯರ್ಥಿ ದ್ರೌಪದಿ ಮುರ್ಮು ಅವರಿಗೆ ಬೆಂಬಲ ಘೋಷಿಸಿದ್ದು ಚರ್ಚೆಗೆ ಕಾರಣವಾಗಿದೆ.
2015-21ರ ಅವಧಿಯಲ್ಲಿ ಜಾರ್ಖಂಡ್ ರಾಜ್ಯಪಾಲರಾಗಿ ಕೆಲಸ ಮಾಡಿದ್ದ ದ್ರೌಪದಿ ಮುರ್ಮು ಅವರಿಗೆ JMM ಪಾರ್ಟಿ ಬೆಂಬಲ ಘೋಷಣೆ ಮಾಡಿರುವುದು
ಕಾಂಗ್ರೆಸ್, RJD ಜೊತೆಗೆ JMM ನ ಹೇಮಂತ್ ಸೋರೆನ್ ಕೂಡ ವಿಪಕ್ಷಗಳ ಅಭ್ಯರ್ಥಿ ಯಶವಂತ ಸಿನ್ಹಾ ಜೊತೆಗೆ ಇದ್ದರು. ಕೆಲ ದಿನಗಳ ಹಿಂದೆ ವಿಪಕ್ಷಗಳ ಸಭೆಯಲ್ಲಿ ಪಾಲ್ಗೊಂಡು ಯಶವಂತ ಸಿನ್ಹಾ ಉಮೇದುವರಿಕೆ ಬೆಂಬಲಿಸಿದ್ದರು. ಈಗ ಇದ್ದಕ್ಕಿದ್ದಂತೆ ಪ್ಲೇಟ್ ಬದಲಿಸಿದ್ದಾರೆ.
ಯಶವಂತ ಸಿನ್ಹಾ ಅವರು ಜಾರ್ಖಂಡ್ ನವರೇ ಆಗಿದ್ದರು ಮುರ್ಮು ಕಡೆಗೆ JMM ಒಲವು ತೋರಿಸುತ್ತಿರುವುದರ ಹಿಂದೆ ಬಿಜೆಪಿ ವ್ಯೂಹ ಇದೆ ಎನ್ನಲಾಗುತ್ತಿದೆ.ದ್ರೌಪದಿ ಮುರ್ಮು ಅವರು ಸೆಂಥಾಲ್ ಬುಡಕಟ್ಟು ಸಮುದಾಯಕ್ಕೆ ಸೇರಿದವರು. ತಾನು ಈ ಮಣ್ಣಿನ ಮಗಳು ಎಂದು ಮುರ್ಮು ಹೇಳಿಕೊಳ್ಳುತ್ತಾರೆ. ಸಿಎಂ ಹೇಮಂತ್ ಸೋರೆನ್ ಕೂಡ ಇದೆ ಬುಡಕಟ್ಟಿಗೆ ಸೇರಿದವರಾಗಿದ್ದಾರೆ. ಹೀಗಾಗಿಯೇ ಮುರ್ಮು ಬೆಂಬಲಕ್ಕೆ JMM ನಿಂತಿದೆ ಎಂದು ಕೆಲವರು ಹೇಳುತ್ತಿದ್ದಾರೆ. ಆದರೆ, ಇದರ ಹಿಂದೆ ಬೇರೇನೋ ಇದೆ ಎಂಬ ಮಾತು ಕೇಳಿಬರುತ್ತಿವೆ.
ಮುರ್ಮು ಅವರಿಗೆ ಮತ ಹಾಕುವಂತೆ JMM ತನ್ನ ಮೂವರು ಸಂಸದರು, 30 ಶಾಸಕರಿಗೆ ಸೂಚನೆ ನೀಡಿದೆ. ಈ ಬೆಳವಣಿಗೆ ಜಾರ್ಖಂಡ್ ರಾಜಕೀಯವನ್ನು ಯಾವ ಹಂತಕ್ಕೆ ಕೊಂಡೊಯ್ಯಲಿದೆಯೋ?
ಸೋರೆನ್ ಬೆಂಬಿಡದ ಮೈನಿಂಗ್ ಕೇಸ್
ಮುಖ್ಯಮಂತ್ರಿ ಹೇಮಂತ್ ಸೋರೆನ್ ರನ್ನು ಗಣಿ ಗುತ್ತಿಗೆ ಹಗರಣದ ಕೇಸ್ ಬೆಂಬಿಡದೆ ಕಾಡುತ್ತಿದೆ. ಒಂದು ಗಣಿಯನ್ನು ತಮಗೆ ತಾವೇ ಹಂಚಿಕೆ ಮಾಡಿಕೊಂಡಿದ್ದಾರೆ ಎಂಬ ಆರೋಪ ಸೋರೆನ್ ಮೇಲಿದೆ. ಇದೆ ಅಂಶ ಝಳಪಿಸಿರುವ ಬಿಜೆಪಿ, ಸೋರೆನ್ ಶಾಸಕತ್ವ ರದ್ದು ಮಾಡುವಂತೆ ಚುನಾವಣಾ ಆಯೋಗದ ಮೆಟ್ಟಿಲೇರಿದೆ. ಇತ್ತೀಚಿಗೆ EC ವಿಚಾರಣೆಗೆಂದು ದೆಹಲಿಗೆ ತೆರಳಿದ್ದ ಹೇಮಂತ್ ಸೋರೆನ್ ಕೇಂದ್ರ ಗೃಹ ಮಂತ್ರಿ ಅಮಿತ್ ಶಾರನ್ನು ಭೇಟಿ ಆಗಿದ್ದರು. ಆಗ ಈ ಪ್ರಕರಣದಿಂದ ಹೊರ ಬರುವ ಸಲುವಾಗಿಯೇ ಅಮಿತ್ ಶಾರನ್ನು ಸೋರೆನ್ ಭೇಟಿ ಆಗಿದ್ದಾರೆ ಎಂಬ ಸುದ್ದಿ ಹಬ್ಬಿತ್ತು.
ಮನಿ ಲಾಂಡೇರಿಂಗ್ ಪ್ರಕರಣದಲ್ಲಿ ಸೋರೆನ್ ಸನ್ನಿಹಿತರಾದ IAS ಪೂಜಾ ಸಿಂಘಲ್ ಬಂಧನದಂತಹ ಪ್ರಕರಣಗಳು ಸೋರೆನ್ ರನ್ನು ಇಕ್ಕಟ್ಟಿಗೆ ಸಿಲುಕಿಸಿದ್ದವು.
JMM ಗೆ ದೂರ ಆಗುತ್ತಿದೆಯಾ ಕಾಂಗ್ರೆಸ್
ಹೇಮಂತ್ ಸೋರೆನ್ ನಿರ್ಣಯ ಮೈತ್ರಿ ಧರ್ಮಕ್ಕೆ ವಿರುದ್ಧವಾಗಿರುವ ಕಾರಣ ಕಾಂಗ್ರೆಸ್ ಗರಂ ಆಗಿದೆ. ಹೊಸ ಬೆಳವಣಿಗೆಗಳಿಂದ ಮತ್ತೊಂದು ರಾಜ್ಯದಲ್ಲಿ ಅಧಿಕಾರ ಕಳೆದುಕೊಳ್ಳುವ ಆತಂಕದಲ್ಲಿ ಕಾಂಗ್ರೆಸ್ ಇದೆ. BJP ಜೊತೆ JMM ಕೈಜೋಡಿಸಬಹುದು ಎಂಬ ಸಂದೇಹ ಕಾಂಗ್ರೆಸ್ ಪಕ್ಷವನ್ನು ಕಾಡುತ್ತಿದೆ.
ಮೇ ತಿಂಗಳಲ್ಲಿ ನಡೆದ ರಾಜ್ಯಸಭೆ ಚುನಾವಣೆಯಲ್ಲಿ ಜಾರ್ಖಂಡ್ ನಿಂದ ಕಾಂಗ್ರೆಸ್ ಒಂದು ಸೀಟ್ ಗೆ ಡಿಮ್ಯಾಂಡ್ ಮಾಡಿತ್ತು. ಆದರೆ, ಈ ಬೇಡಿಕೆಯನ್ನು ಹೇಮಂತ್ ಸೋರೆನ್ ತಿರಸ್ಕರಿಸಿದ್ದರು. ಮೈತ್ರಿ ಧರ್ಮವನ್ನು ಸೋರೆನ್ ಪಾಲಿಸುತ್ತಿಲ್ಲ ಎಂದು ಬೇಸರಗೊಂಡಿರುವ ಕಾಂಗ್ರೆಸ್ ಹೈಕಮಾಂಡ್, ತಮ್ಮ ನಾಯಕರಿಗೆ ಸಿಎಂ ಗೆ ದೂರ ಇರುವಂತೆ ಸೂಚಿಸಿದೆ ಎನ್ನುವುದು ಸ್ಥಳೀಯ ಮಾಧ್ಯಮಗಳು ವರದಿ ಮಾಡಿವೆ.
ಬಿಜೆಪಿಗೆ ಲಾಭವೇನು?
2019ರಲ್ಲಿ ನಡೆದ ಜಾರ್ಖಂಡ್ ವಿಧಾನಸಭಾ ಚುನಾವಣೆಯಲ್ಲಿ ಬುಡಕಟ್ಟು ಸಮುದಾಯ ಬಿಜೆಪಿ ಬೆಂಬಲಕ್ಕೆ ನಿಲ್ಲಲಿಲ್ಲ. ಗಿರಿಜನ ಪ್ರಾಬಲ್ಯದ 28ಕ್ಷೇತ್ರಗಳಲ್ಲಿ ಕಾಂಗ್ರೆಸ್-JMM ಮೈತ್ರಿಕೂಟ ಬರೋಬ್ಬರಿ 25ರಲ್ಲಿ ಗೆದ್ದಿತ್ತು. ಬಿಜೆಪಿಗೆ ಕೇವಲ ಎರಡು ಸ್ಥಾನ ಲಭಿಸಿತ್ತು.
ಈಗ ಈ ಮೈತ್ರಿಯನ್ನು ಬೇರ್ಪಡಿಸಿ JMM ಜೊತೆ ಸರ್ಕಾರ ರಚಿಸಿದರೆ, ಕಾಂಗ್ರೆಸ್ ಮುಕ್ತ ಕನಸಿಗೆ ಮತ್ತಷ್ಟು ಹತ್ತಿರ ಆಗುವುದರ ಜೊತೆಗೆ 2024ರ ಲೋಕಸಭೆ ಚುನಾವಣೆಯಲ್ಲಿ JMM ಜೊತೆಗೂಡಿ ಗಿರಿಜನರ ಮತ ಕೊಳ್ಳೆ ಹೊಡೆಯಬಹುದು ಎಂಬುದು ಬಿಜೆಪಿ ಲೆಕ್ಕಾಚಾರ ಎನ್ನಲಾಗಿದೆ.
ಮೋದಿಗೆ ಹೊಗಳಿಕೆ
ಬಿಜೆಪಿಗೆ ಹತ್ತಿರವಾಗಲು ಪ್ರಯತ್ನಿಸುತ್ತಿರುವ ಹೇಮಂತ್ ಸೋರೆನ್ ಇತ್ತೀಚಿಗೆ ಪ್ರಧಾನಿ ಮೋದಿಯನ್ನು ಬಹಿರಂಗವಾಗಿ ಹೊಗಳಿದ್ದರು. ದೇವಘಡ ಏರ್ಪೋರ್ಟ್ ಉದ್ಘಾಟನೆಗೆ ಆಗಮಿಸಿದ ಮೋದಿಗೆ ಹೇಮಂತ್ ಸೋರೆನ್ ಹತ್ತಿರ ಇದ್ದು ಎಲ್ಲಾ ವ್ಯವಸ್ಥೆ ಮಾಡಿದ್ದರು. ಮೋದಿ ಸಮರ್ಥ ನಾಯಕ ಎಂದು ಹೊಗಳಿದ್ದರು.
‘‘ಕೇಂದ್ರದ ಸಹಕಾರ ಸಿಕ್ಕಿದಲ್ಲಿ ಮುಂದಿನ ಐದು ವರ್ಷಗಳಲ್ಲಿ ಅಭಿವೃದ್ಧಿ ಹೊಂದಿದ ರಾಜ್ಯಗಳ ಸಾಲಿನಲ್ಲಿ ಜಾರ್ಖಂಡ್ ರಾಜ್ಯವನ್ನು ನಿಲ್ಲಿಸಲಾಗುವುದು. ಕೇಂದ್ರ, ರಾಜ್ಯಗಳ ಮಧ್ಯೆ ಪರಸ್ಪರ ಸಹಕಾರ ಇದ್ದಲ್ಲಿ ತ್ವರಿತ ಅಭಿವೃದ್ದಿ ಸಾಧ್ಯ ಆಗುತ್ತದೆ ’’ಎಂದರು. ಈ ಮೂಲಕ ಮೈತ್ರಿ ಬದಲಾಯಿಸುವ ಸುಳಿವನ್ನು ಸೋರೆನ್ ನೀಡಿದರು.