ADVERTISEMENT
ಮಹತ್ವದ ಬೆಳವಣಿಗೆಯಲ್ಲಿ ತೈಲ ರಫ್ತು ಮಾಡುವ ರಾಷ್ಟ್ರಗಳ ಸಂಘ (OPEC) ಇವತ್ತಿನಿಂದ ಕಚ್ಚಾತೈಲ ಉತ್ಪಾದನೆಯನ್ನು ಕಡಿತಗೊಳಿಸಿವೆ.
ಸೌದಿ ಅರೇಬಿಯಾ ಪ್ರತಿ ದಿನ 5 ಲಕ್ಷ ಬ್ಯಾರೆಲ್ನ್ನಷ್ಟು ಕಚ್ಚಾತೈಲ ಉತ್ಪಾದನೆಯನ್ನು ಕಡಿತಗೊಳಿಸಿದೆ. ಇರಾಕ್ 2 ಲಕ್ಷದ 11 ಸಾವಿರ ಬ್ಯಾರೆಲ್ನ್ನಷ್ಟು, ಯುಎಇ, ಕುವೈತ್, ಓಮನ್ ಮತ್ತು ಅಲ್ಗೇರಿಯಾ ಕೂಡಾ ಕಚ್ಚಾತೈಲ ಉತ್ಪಾದನೆಯನ್ನು ಕಡಿತಗೊಳಿಸಿವೆ.
ಕಚ್ಚಾತೈಲ ಉತ್ಪಾದನೆ ಕಡಿತದಿಂದ ಬೆಲೆ ಏರಿಕೆ:
ಕಚ್ಚಾತೈಲ ಉತ್ಪಾದನೆ ಕಡಿತ ಘೋಷಣೆಯಿಂದ ಕಚ್ಚಾತೈಲದ ಬೆಲೆ ಬ್ಯಾರಲ್ಗೆ 5 ಡಾಲರ್ನಷ್ಟು ಹೆಚ್ಚಳವಾಗಿದೆ. ತಜ್ಞರ ಅಂದಾಜಿನ ಪ್ರಕಾರ ಬ್ಯಾರೆಲ್ಗೆ 10 ಡಾಲರ್ ಹೆಚ್ಚಳವಾದರೂ ಆಗಬಹುದು.
ಭಾರತ ಮತ್ತು ರಷ್ಯಾ ತೈಲ:
ಉಕ್ರೇನ್ ಮೇಲೆ ರಷ್ಯಾ ಯುದ್ಧ ಪ್ರಾರಂಭಿಸಿದ ಬಳಿಕ ರಷ್ಯಾ ಕಚ್ಚಾತೈಲದ ಮೇಲೆ ಯುರೋಪಿಯನ್ ಒಕ್ಕೂಟ ನಿರ್ಬಂಧ ಹೇರಿದೆ. ಈ ಹಿನ್ನೆಲೆಯಲ್ಲಿ ಭಾರತ, ಚೀನಾಕ್ಕೆ ರಷ್ಯಾ ಕಡಿಮೆ ಬೆಲೆಯಲ್ಲಿ ಕಚ್ಚಾತೈಲ ರಫ್ತು ಮಾಡುತ್ತಿದೆ.
ಮಾರ್ಚ್ನಲ್ಲಿ ರಷ್ಯಾದಿಂದ ಭಾರತ ದಾಖಲೆ ಪ್ರಮಾಣದಲ್ಲಿ ಕಚ್ಚಾತೈಲ ಆಮದು ಮಾಡಿದೆ. ಪ್ರತಿ ದಿನಕ್ಕೆ 1 ಲಕ್ಷದ 62 ಸಾವಿರ ಬ್ಯಾರೆಲ್ನ್ನಷ್ಟು ತೈಲ ಭಾರತಕ್ಕೆ ರಫ್ತಾಗುತ್ತಿದೆ. ನಮ್ಮ ಅಗತ್ಯದ ಒಟ್ಟು ಕಚ್ಚಾತೈಲದಲ್ಲಿ ರಷ್ಯಾ ಶೇಕಡಾ 40ರಷ್ಟನ್ನು ಪೂರೈಕೆ ಮಾಡುತ್ತಿದೆ.
ಅಪಾರ ಪ್ರಮಾಣದ ಹಣ ಉಳಿತಾಯ:
ರಷ್ಯಾದಿಂದ ಭಾರತ ಪ್ರತಿ ಬ್ಯಾರೆಲ್ಗೆ 60 ಡಾಲರ್ ಮಿತಿಯೊಂದಿಗೆ ತೈಲ ರಫ್ರು ಮಾಡಿದೆ. ಈ ದರ ಕಡಿತದಿಂದ ಕಳೆದ ವರ್ಷದ ಡಿಸೆಂಬರ್ ವೇಳೆಗೆ ಭಾರತಕ್ಕೆ 35 ಸಾವಿರ ಕೋಟಿ ರೂಪಾಯಿ ಉಳಿತಾಯ ಆಗಿದೆ ಎನ್ನುವುದು ಲೆಕ್ಕಾಚಾರ.
ಜನಸಾಮಾನ್ಯರಿಗೆ ದಕ್ಕಿದ್ದೇನು..?
ಉಕ್ರೇನ್ ಮೇಲೆ ರಷ್ಯಾ ಯುದ್ಧಕ್ಕೂ ಮೊದಲು ಭಾರತಕ್ಕೆ ರಷ್ಯಾದಿಂದ ಪೂರೈಕೆ ಆಗುತ್ತಿದ್ದ ಕಚ್ಚಾತೈಲದ ಪ್ರಮಾಣ ಶೇಕಡಾ 2ರಷ್ಟು ಮಾತ್ರ. ಆದರೆ ಯುದ್ಧದ ಬಳಿಕ ಆ ಪ್ರಮಾಣ ಶೇಕಡಾ 16ರ ಗಡಿ ದಾಟಿದೆ.
ಸದ್ಯ ಇರಾಕ್ನ್ನು ಹಿಂದಿಕ್ಕಿರುವ ರಷ್ಯಾ ಭಾರತಕ್ಕೆ ಕಚ್ಚಾತೈಲ ಪೂರೈಸುತ್ತಿರುವ ರಾಷ್ಟ್ರಗಳ ಪೈಕಿ ಮೊದಲ ಸ್ಥಾನದಲ್ಲಿದೆ. ಮೊದಲ ಸ್ಥಾನದಲ್ಲಿದ್ದ ಇರಾಕ್ 2ನೇ ಸ್ಥಾನದಲ್ಲಿದೆ. ಸೌದಿ ಅರೇಬಿಯಾ ಮತ್ತು ಯುಎಇ ನಂತರದ ಸ್ಥಾನದಲ್ಲಿದೆ.
ಖಾಸಗಿ ತೈಲ ಕಂಪನಿಗಳಿಗೆ ಲಾಭ:
ದೇಶದ ಜನರ ಹಿತಕ್ಕಾಗಿ ರಷ್ಯಾದಿಂದ ಅಗ್ಗದ ಮೊತ್ತದಲ್ಲಿ ಕಚ್ಚಾತೈಲ ಖರೀದಿ ಮಾಡುತ್ತಿದ್ದೇವೆ ಎಂದು ಹಲವು ಬಾರಿ ವಿದೇಶಾಂಗ ಸಚಿವ ಜೈಶಂಕರ್ ಸಮರ್ಥಿಸಿಕೊಂಡಿದರು.
ಆದರೆ ರಷ್ಯಾದಿಂದ ಬ್ಯಾರೆಲ್ಗೆ ಶೇಕಡಾ 30ರಷ್ಟು ಬೆಲೆ ಕಡಿತದೊಂದಿಗೆ ಕಚ್ಚಾತೈಲ ಖರೀದಿಸುತ್ತಿದ್ದರೂ ದೇಶದ ಮಾರುಕಟ್ಟೆಯಲ್ಲಿ ಪೆಟ್ರೋಲ್, ಡೀಸೆಲ್ ಬೆಲೆ ಇಳಿಕೆ ಆಗಿಲ್ಲ.
ಅಂಕಿಅಂಶಗಳ ಪ್ರಕಾರ ಭಾರತಕ್ಕೆ ರಷ್ಯಾ ಮಾರಾಟ ಮಾಡುತ್ತಿರುವ ಅಗ್ಗದ ಕಚ್ಚಾತೈಲದಲ್ಲಿ ಅತ್ಯಧಿಕ ಪ್ರಮಾಣ ಖಾಸಗಿ ಕಂಪನಿಗಳ ಪಾಲಾಗುತ್ತಿದೆ. ಅಂದರೆ ಖಾಸಗಿ ಕಂಪನಿಗಳೇ ರಷ್ಯಾದಿಂದ ಆಗುತ್ತಿರುವ ಒಟ್ಟು ಆಮದಿನಲ್ಲಿ ಶೇಕಡಾ 60ರಷ್ಟು ಖರೀದಿ ಮಾಡುತ್ತಿವೆ.
ಯುರೋಪ್ ರಾಷ್ಟ್ರಗಳಿಗೆ ಮಾರಾಟ:
ಹೀಗೆ ರಷ್ಯಾದಿಂದ ಅಗ್ಗದ ದರಕ್ಕೆ ಕಚ್ಚಾತೈಲ ಆಮದು ಮಾಡಿಕೊಳ್ಳುವ ಖಾಸಗಿ ಕಂಪನಿಗಳು ಸಂಸ್ಕರಿಸಿ ಯುರೋಪಿಯನ್ ಒಕ್ಕೂಟಗಳಿಗೆ ಮಾರಾಟ ಮಾಡುತ್ತಿವೆ.
ರಷ್ಯಾದಿಂದ ಕಚ್ಚಾತೈಲ ಖರೀದಿಗೆ ನಿರ್ಬಂಧ ಹೇರಿರುವ ಯುರೋಪಿಯನ್ ಒಕ್ಕೂಟ ಭಾರತದ ಖಾಸಗಿ ಕಂಪನಿಗಳಿಂದ ಅತ್ಯಧಿಕ ಪ್ರಮಾಣದಲ್ಲಿ ಸಂಸ್ಕರಿಸಿದ ತೈಲೋತ್ಪನ್ನಗಳನ್ನು ಆಮದು ಮಾಡಿಕೊಳ್ಳುತ್ತಿದೆ.
ಭಾರತದಲ್ಲಿ 23 ತೈಲ ಸಂಸ್ಕರಣಗಳಿವೆ. ಇವುಗಳಲ್ಲಿ ಪ್ರತಿ ವರ್ಷ 249 ದಶಲಕ್ಷ ಟನ್ನ್ನು ತೈಲ ಸಂಸ್ಕರಣೆಯಾಗುತ್ತದೆ. ಭಾರತ ವಿಶ್ವದಲ್ಲೇ ನಾಲ್ಕನೇ ಅತೀ ದೊಡ್ಡ ತೈಲ ಸಂಸ್ಕರಣಾ ದೇಶ.
ಭಾರತದಲ್ಲಾಗುವ ತೈಲ ಸಂಸ್ಕರಣೆಯಲ್ಲಿ ಶೇಕಡಾ 49ರಷ್ಟು ಪ್ರಮಾಣ ದೈತ್ಯ ಉದ್ಯಮಿ ಮುಖೇಶ ಅಂಬಾನಿ ಒಡೆತನದ ರಿಲಯನ್ಸ್ ಮತ್ತು ರಷ್ಯಾ ಮೂಲದ ನಯರಾ ಕಂಪನಿಯ ಪಾಲಿದೆ.
ಉಕ್ರೇನ್ ಮೇಲೆ ರಷ್ಯಾದ ಯುದ್ಧದದ ಬಳಿಕ ಯರೋಪಿಯನ್ ಒಕ್ಕೂಟಕ್ಕೆ ಭಾರತದ ಸಂಸ್ಕರಿತ ತೈಲದ ರಫ್ತು ಶೇಕಡಾ 20.4ರಷ್ಟು ಹೆಚ್ಚಿದೆ. ಜೊತೆಗೆ ಈ ರಫ್ತಿನಲ್ಲಿ ಖಾಸಗಿ ಕಂಪನಿಗಳ ಪಾಲು ಶೇಕಡಾ 95ಕ್ಕೆ ಹೆಚ್ಚಳವಾಗಿದೆ. ಅಂದರೆ ಖಾಸಗಿ ಕಂಪನಿಗಳು ಪೆಟ್ರೋಲ್, ಡೀಸೆಲ್ನ್ನು ಭಾರತದ ಮಾರುಕಟ್ಟೆಯಲ್ಲೇ ಮಾರಾಟ ಮಾಡುವುದರ ಬದಲು ಹೊರದೇಶಗಳಿಗೆ ಮಾಡುತ್ತಿವೆ.
ಕಳೆದ ವರ್ಷದ ಪ್ರತಿ ಬ್ಯಾರೆಲ್ಗೆ 112 ಡಾಲರ್ ಇದ್ದ ಬೆಲೆ ಮಾರ್ಚ್ 31ರ ವೇಳೆಗೆ ಪ್ರತಿ ಬ್ಯಾರೆಲ್ಗೆ 80 ಡಾಲರ್ಗೆ ಕುಸಿದಿದೆ. ಅಂದರೆ ಪ್ರತಿ ಬ್ಯಾರೆಲ್ಗೆ 32 ಡಾಲರ್ನ್ನಷ್ಟು ಇಳಿಕೆಯಾಗಿದೆ. ಆದರೆ ಕಳೆದ ಮೇ ತಿಂಗಳಿಂದ ದೇಶದಲ್ಲಿ ಪೆಟ್ರೋಲ್, ಡೀಸೆಲ್ ಬೆಲೆ ಇಳಿಕೆ ಆಗಿಲ್ಲ.
ADVERTISEMENT