ಪ್ರಧಾನಮಂತ್ರಿ ನರೇಂದ್ರ ಮೋದಿ ಅವರ ಯೂಟ್ಯೂಬ್ ಚಾನೆಲ್ ಸಬ್ಸ್ಕ್ರೈಬರ್ಗಳ ಸಂಖ್ಯೆ ಇವತ್ತು 2 ಕೋಟಿ ದಾಟಿದೆ. ಈ ಮೂಲಕ 2 ಕೋಟಿ ಸಬ್ಸ್ಕ್ರಿಷನ್ ಉಳ್ಳ ಸ್ವಂತ ಯೂಟ್ಯೂಬ್ ಚಾನೆಲ್ ಹೊಂದಿರುವ ವಿಶ್ವದ ಮೊದಲ ರಾಜಕೀಯ ನಾಯಕ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ.
ನರೇಂದ್ರ ಮೋದಿಯವರ ಯೂಟ್ಯೂಬ್ ಚಾನೆಲ್ ಅರಂಭವಾಗಿದ್ದು ಗುಜರಾತ್ ಮುಖ್ಯಮಂತ್ರಿಯಾಗಿದ್ದಾಗ 2007ರ ಅಕ್ಟೋಬರ್ 26ರಂದು. ಇದುವರೆಗೆ ಈ ಚಾನೆಲ್ನಲ್ಲಿ 23,407 ವೀಡಿಯೋಗಳನ್ನು ಪ್ರಕಟಿಸಲಾಗಿದೆ. ಕಳೆದ 16 ವರ್ಷ ಎರಡು ತಿಂಗಳಲ್ಲಿ ಆಗಿರುವ ಒಟ್ಟು ವೀಕ್ಷಣೆ 453 ಕೋಟಿ.
2014ರ ಲೋಕಸಭಾ ಚುನಾವಣೆಗೂ ಮೊದಲು 2014ರ ಏಪ್ರಿಲ್ 16ರಂದು ಅಪ್ಲೋಡ್ ಮಾಡಲಾದ ಇಂಡಿಯಾ ಟಿವಿ ಮುಖ್ಯಸ್ಥ ರಜತ್ ಶರ್ಮಾ ಅವರ ಜೊತೆಗಿನ ಮೋದಿ ಅವರ ಅಪ್ ಕೀ ಅದಾಲತ್ ಶೋ ಅತ್ಯಧಿಕ 7.5 ಕೋಟಿ ವೀಕ್ಷಣೆಯನ್ನು ಕಂಡಿದ್ದು, ಮೋದಿ ಯೂಟ್ಯೂಬ್ ಚಾನೆಲ್ನ ಅತ್ಯಂತ ಜನಪ್ರಿಯ ವೀಡಿಯೋ.
ಲೈವ್ ವೀಡಿಯೋಗಳ ಪೈಕಿ ನಟ ಅಕ್ಷಯ್ ಕುಮಾರ್ ಅವರಿಗೆ 2019ರ ಏಪ್ರಿಲ್ 24ರಂದು ನೀಡಿದ್ದ ಸಂದರ್ಶನದ ನೇರ ಪ್ರಸಾರ 7.5 ಕೋಟಿ ವೀಕ್ಷಣೆಯನ್ನು ಕಂಡು ಮೋದಿ ಯೂಟ್ಯೂಬ್ ಚಾನೆಲ್ಗಳಲ್ಲಿ ಲೈವ್ ವೀಡಿಯೋಗಳಲ್ಲೇ ಅತ್ಯಂತ ಜನಪ್ರಿಯವಾಗಿದೆ.
ರಾಹುಲ್ ಗಾಂಧಿ:
ರಾಹುಲ್ ಗಾಂಧಿ ಅವರು ತಮ್ಮದೇ ಹೆಸರಲ್ಲಿ ಯೂಟ್ಯೂಬ್ ಚಾನೆಲ್ ಶುರು ಮಾಡಿದ್ದು ಆಗಸ್ಟ್ 10,2017ರಲ್ಲಿ. ಈ ಚಾನೆಲ್ನ ಸಬ್ಸ್ಕ್ರೈಬರ್ಗಳ ಸಂಖ್ಯೆ 35 ಲಕ್ಷ.
6 ವರ್ಷ 4 ತಿಂಗಳಲ್ಲಿ ರಾಹುಲ್ ಅವರ ಯೂಟ್ಯೂಬ್ ಚಾನೆಲ್ಗಳಲ್ಲಿ ಹಾಕಲಾಗಿರುವ ವೀಡಿಯೋಗಳ ಸಂಖ್ಯೆ 1,836. ಆಗಿರುವ ಒಟ್ಟು ವೀಕ್ಷಣೆ 56 ಕೋಟಿ 45 ಲಕ್ಷ.
ರಾಹುಲ್ ಯೂಟ್ಯೂಬ್ ಚಾನೆಲ್ನಲ್ಲಿ ಅತ್ಯಂತ ಜನಪ್ರಿಯ ವೀಡಿಯೋ ಇದೇ ವರ್ಷದ ಜುಲೈ 16ರಂದು ಹರಿಯಾಣದಲ್ಲಿ ರೈತರೊಂದಿಗೆ ಟ್ರ್ಯಾಕ್ಟರ್ನಲ್ಲಿ ಉಳುಮೆ ಮಾಡಿದ ವೀಡಿಯೋ. ಇದರ ವೀಕ್ಷಣೆ ಆಗಿದ್ದು 41 ಲಕ್ಷ.
ಲೈವ್ ವೀಡಿಯೋಗಳ ಪೈಕಿ ತೆಲಂಗಾಣ ವಿಧಾನಸಭಾ ಚುನಾವಣಾ ಪ್ರಚಾರದ ಭಾಗವಾಗಿ ಕಮ್ಮಂ ಜಿಲ್ಲೆಯಲ್ಲಿ ಕೈಗೊಳ್ಳಲಾಗಿದ್ದ ಜನಘರ್ಜನಾ ಸಭೆಯ ನೇರ ಪ್ರಸಾರ – ಇದರ ವೀಕ್ಷಣೆ ಆಗಿದ್ದು 18 ಲಕ್ಷ.
ಮೋದಿ-ರಾಹುಲ್ ಸರಾಸರಿ ಲೆಕ್ಕಾಚಾರ:
16 ವರ್ಷ 2 ತಿಂಗಳಲ್ಲಿ ಪ್ರಧಾನಿ ಮೋದಿಯವರ ಯೂಟ್ಯೂಬ್ ಚಾನೆಲ್ಗೆ ಪ್ರತಿ ತಿಂಗಳು ಆಗಿರುವ ಸಬ್ಸ್ಕ್ರೈಬರ್ಗಳ ಸರಾಸರಿ ಸಂಖ್ಯೆ 1 ಲಕ್ಷದ 3 ಸಾವಿರ.
76 ತಿಂಗಳಲ್ಲಿ ರಾಹುಲ್ ಗಾಂಧಿ ಯೂಟ್ಯೂಬ್ ಚಾನೆಲ್ಗೆ ಪ್ರತಿ ತಿಂಗಳು ಆಗಿರುವ ಸಬ್ಸ್ಕ್ರೈಬರ್ಗಳ ಸರಾಸರಿ ಸಂಖ್ಯೆ 46 ಸಾವಿರ.
ವೀಕ್ಷಣೆ ಲೆಕ್ಕಾಚಾರಕ್ಕೆ ಬಂದರೆ ವರ್ಷಕ್ಕೆ ಆಗಿರುವ ಮೋದಿಯವರ ಯೂಟ್ಯೂಬ್ ಚಾನೆಲ್ನ ವಾರ್ಷಿಕ ವೀಕ್ಷಣೆ 28 ಕೋಟಿ 12 ಲಕ್ಷ.
ರಾಹುಲ್ ಗಾಂಧಿ ವೀಡಿಯೋದ ವಾರ್ಷಿಕ ಸರಾಸರಿ ವೀಕ್ಷಣೆ 9 ಕೋಟಿ 33 ಲಕ್ಷ.
ಮೋದಿಯವರ ಹಳೆಯ ವೀಡಿಯೋಗಳಷ್ಟೇ ಹೆಚ್ಚು ಜನಪ್ರಿಯ:
ಮೋದಿಯವರ ಯೂಟ್ಯೂಬ್ ಚಾನೆಲ್ನಲ್ಲಿ ಜನಪ್ರಿಯ ವೀಡಿಯೋಗಳ ಕೆಗಟರಿಯಲ್ಲಿ ಅವರ ಹಳೆಯ ವೀಡಿಯೋಗಳಷ್ಟೇ ಹೆಚ್ಚು ಕಾಣಿಸುತ್ತವೆ.
ರಾಹುಲ್ ಗಾಂಧಿಯವರ ಇತ್ತೀಚಿನ ವೀಡಿಯೋಗಳೇ ಜನಪ್ರಿಯ:
ಆದರೆ ರಾಹುಲ್ ಗಾಂಧಿಯವರ ಜನಪ್ರಿಯ ವೀಡಿಯೋಗಳ ಪೈಕಿ ಒಂದು ವರ್ಷದೊಳಗಿನ ವೀಡಿಯೋಗಳ ಸಂಖ್ಯೆ ಹೆಚ್ಚಿದೆ.
ADVERTISEMENT
ADVERTISEMENT