ಮಂಡ್ಯ: ನಿಷೇಧಾಜ್ಞೆ ಉಲ್ಲಂಘಿಸಿ 2017ರಲ್ಲಿ ಬೈಕ್ ರ್ಯಾಲಿ ನಡೆಸಿದ್ದ ಪ್ರಕರಣಕ್ಕೆ ಸಂಬಂಧಿಸಿ ಮಂಡ್ಯ ಬಿಜೆಪಿಯ 17 ಕಾರ್ಯಕರ್ತರಿಗೆ ಪಾಂಡವಪುರ ಜೆಎಂಎಫ್ಸಿ ಕೋರ್ಟ್ ಸಮನ್ಸ್ ಜಾರಿಗೊಳಿಸಿದೆ.
ಈ ಕಾರ್ಯಕರ್ತರು ಎಸ್ ಡಿಪಿಐ, ಪಿಎಫ್ ಐ ಸಂಘಟನೆಗಳ ವಿರುದ್ಧದ ಪ್ರತಿಭಟನೆಗೆ ಪಾಂಡವಪುರದಿಂದ ಮಂಗಳೂರಿಗೆ ಬೈಕ್ ರ್ಯಾಲಿ ಮೂಲಕ ಹೊರಟಿದ್ದರು. ಇದೇ ವೇಳೆ ಪಾಂಡವಪುರದಲ್ಲಿ ಪ್ರತಿಭಟನಾಕಾರರನ್ನು ತಡೆದಿದ್ದ ಪೊಲೀಸರು, ಎಫ್ ಐಆರ್ ದಾಖಲಿಸಿ ನಂತರ ಚಾರ್ಜ್ಶೀಟ್ ಸಲ್ಲಿಸಿದ್ದರು.
ಪ್ರಕರಣದ ವಿಚಾರಣೆಗೆ ಕೋರ್ಟ್ಗೆ ಹಾಜರಾಗದ ಹಿನ್ನೆಲೆಯಲ್ಲಿ ಬಿಜೆಪಿ ಕಾರ್ಯಕರ್ತರಿಗೆ ಸಮನ್ಸ್ ಜಾರಿ ಮಾಡಲಾಗಿದೆ. ಡಿಸೆಂಬರ್ ತಿಂಗಳಲ್ಲೇ ಕೋರ್ಟ್ ಸಮನ್ಸ್ ಜಾರಿ ಮಾಡಿದ್ದು, ಇದೀಗ ಮಾಹಿತಿ ಬಹಿರಂಗಗೊಂಡಿದೆ. ಕಾರ್ಯಕರ್ತರಿಗೆ ಸಮನ್ಸ್ ಜಾರಿ ವಿಚಾರವಾಗಿ ಪೊಲೀಸರ ವಿರುದ್ಧ ಬಿಜೆಪಿ ಆಕ್ರೋಶ ವ್ಯಕ್ತಪಡಿಸಿದೆ. ಇಷ್ಟು ವರ್ಷ ಇಲ್ಲದ ಸಮನ್ಸ್ ಈಗ ಯಾಕೆ ಎಂದು ಬಿಜೆಪಿ ಪ್ರಶ್ನೆ ಮಾಡಿದೆ. ಜತೆಗೆ, ರಾಜ್ಯ ಸರ್ಕಾರ ದ್ವೇಷದ ರಾಜಕಾರಣ ಮಾಡುತ್ತಿದೆ. ಹಿಂದೂ, ಬಿಜೆಪಿ ಕಾರ್ಯಕರ್ತರನ್ನು ಟಾರ್ಗೆಟ್ ಮಾಡುತ್ತಿದೆ ಎಂದು ಆಕ್ರೋಶ ವ್ಯಕ್ತಪಡಿಸಿದೆ.