ಪಿಎಸ್ಐ ನೇಮಕಾತಿ ಹಗರಣಕ್ಕೆ ಎಲ್ಲಾ ಆಯಾಮಗಳಿಂದಲೂ ತನಿಖೆ ನಡೆಯುತ್ತಿದೆ, ಸರ್ಕಾರ ಹಸ್ತಕ್ಷೇಪ ಮಾಡುವುದಿಲ್ಲ, ಮುಕ್ತ ಮತ್ತು ನ್ಯಾಯಸಮ್ಮತ ತನಿಖೆ ನಡೆಯುತ್ತಿದೆ, ಪ್ರತಿದಿನ ಆರೋಪಿಗಳು ಬಂಧನವಾಗುತ್ತಿರುವುದು ಇದಕ್ಕೆ ಸಾಕ್ಷಿ. ಅಶ್ವಥ್ ನಾರಾಯಣ್ ವಿರುದ್ಧ ಕಾಂಗ್ರೆಸ್ ಕೇವಲ ಹಿಟ್ ಆ್ಯಂಡ್ ರನ್ ಆರೋಪ ಮಾಡುತ್ತಿದೆ ಎಂದು ಹೇಳುವ ಮೂಲಕ ಸಚಿವರ ಪರ ಬ್ಯಾಟ್ ಬೀಸಿದ್ದಾರೆ.
ಬೆಂಗಳೂರಿನಲ್ಲಿಂದು ಸುದ್ದಿಗಾರರ ಜೊತೆ ಮಾತನಾಡಿದ ಅವರು, ಪಿಎಸ್ಐ ನೇಮಕಾತಿ ಪರೀಕ್ಷೆ ಹಗರಣದಲ್ಲಿ ನಿಷ್ಪಕ್ಷಪಾತ, ನಿಷ್ಠುರ ತನಿಖೆಯಾಗಬೇಕೆಂಬುದೇ ಸರ್ಕಾರದ ಉದ್ದೇಶ. ಕಾಂಗ್ರೆಸ್ ನವರು ಇದರಲ್ಲಿ ಭಾಗಿಯಾಗಿದ್ದಾರೆ ಎಂಬ ಸಂದೇಹ ಉಂಟಾಗುತ್ತಿದೆ. ಎಲ್ಲಿ ತಮ್ಮ ಬಣ್ಣ ಬಯಲಾಗುತ್ತದೋ ಎಂಬ ಭಯ ಅವರಿಗೆ ಶುರುವಾಗಿದೆ ಎಂದು ಕೂಡ ಕಾಂಗ್ರೆಸ್ ನಾಯಕರ ವಿರುದ್ಧ ಸಿಎಂ ವಾಗ್ದಾಳಿ ನಡೆಸಿದರು.
ಸಚಿವ ಅಶ್ವಥ್ ನಾರಾಯಣ ವಿರುದ್ಧ ಆರೋಪಕ್ಕೆ ಯಾವುದೇ ಸಾಕ್ಷಿಗಳಿಲ್ಲ, ಸುಖಾಸುಮ್ಮನೆ ಆಧಾರರಹಿತ ಆರೋಪ ಮಾಡುತ್ತಿದ್ದಾರೆ. ಜವಾಬ್ದಾರಿಯುತ ವಿರೋಧ ಪಕ್ಷದಲ್ಲಿದ್ದುಕೊಂಡು ಆರೋಪ ಮಾಡುವಾಗ ಸಣ್ಣ ಸಾಕ್ಷಿಯಾದರೂ ಬೇಕು. ಅದಕ್ಕೆ ಸಚಿವ ಅಶ್ವಥ್ ನಾರಾಯಣ ವಿರುದ್ಧ ಹಿಟ್ ಅಂಡ್ ರನ್ ಮಾಡುತ್ತಿದ್ದಾರೆ, ಹಿಟ್ ಅಂಡ್ ರನ್ ವರ್ತನೆ ಹೆಚ್ಚು ದಿನ ನಡೆಯುವುದಿಲ್ಲ.
ಕಾಂಗ್ರೆಸ್ ನಾಯಕರು ಸೇರಿದಂತೆ ಎಲ್ಲರೂ ಪಿಎಸ್ಐ ಅಕ್ರಮದ ಬಗ್ಗೆ ನೀಡುವ ದೂರುಗಳು ಮತ್ತು ದಾಖಲೆಗಳನ್ನು ಪರಿಶೀಲಿಸುತ್ತೇವೆ. ತನಿಖೆಯನ್ನು ಮಾಡಿಸಿ ಯಾರೇ ತಪ್ಪಿತಸ್ಥರಿದ್ದರೂ ಕ್ರಮ ಕೈಗೊಳ್ಳಲಾಗುತ್ತದೆ. ಹಲವಾರು ಅಧಿಕಾರಿಗಳ ಸಮೇತರಾಗಿ ಕಾರ್ಯಾಚರಣೆ ಮಾಡುತ್ತಿರುವುದೇ ಅದಕ್ಕೆ ಸಾಕ್ಷಿ ಎಂದರು.
ಕಾಂಗ್ರೆಸ್ ಅಧಿಕಾರದಲ್ಲಿದ್ದಾಗಲೂ ಅಕ್ರಮ ನಡೆದಿದ್ದವು. ಸಾಕಷ್ಟು ಪರೀಕ್ಷೆ ನಡೆದು ಅಕ್ರಮ ಹೊರಬಂದಿದ್ದವು ಆಗ ಏಕೆ ಕ್ರಮ ಕೈಗೊಂಡಿರಲಿಲ್ಲ. ಈಗ ನಾವು ಅಕ್ರಮಗಳನ್ನು ಬಯಲಿಗೆಳೆಯುತ್ತಿರುವಾಗ ಕೆಲವು ಕಾಂಗ್ರೆಸ್ ಮುಖಂಡರ ಬಂಧನವಾಗಿದೆ. ಅವರ ಮುಖಾಂತರ ಎಲ್ಲಿ ಬಣ್ಣ ಬಯಲಾಗುತ್ತದೋ ಎಂಬ ಭಯದಿಂದ ಈ ರೀತಿ ಹಿಟ್ ಅಂಡ್ ರನ್ ಮಾಡುತ್ತಿದ್ದಾರೆ. ಕಾಂಗ್ರೆಸ್ ನಾಯಕರ ಮಾತಿಗೆ, ಆರೋಪಕ್ಕೆ ಕಿಂಚಿತ್ತು ಬೆಲೆ ಇಲ್ಲ. ದಿವ್ಯಾ ಹಾಗರಗಿ ಮಾತ್ರವಲ್ಲದೆ ಇನ್ನೂ ಹಲವರು ಬಂಧನವಾಗುತ್ತಾರೆ ಎಂದರು.
https://youtu.be/qPAnMTXlaac