ಪಿಎಸ್ಐ ಅಕ್ರಮ ನೇಮಕಾತಿಗೆ ಸಂಬಂಧಿಸಿದಂತೆ ಸಿಐಡಿ ಬಂಧನಕ್ಕೆ ಒಳಗಾಗಿರುವ ರಾಯಚೂರು ಜಿಲ್ಲೆ ಲಿಂಗಸುಗೂರು ಉಪವಿಭಾಗದ ಡಿವೈಎಸ್ಪಿ ಮಲ್ಲಿಕಾರ್ಜುನ ಸಾಲಿ ಹಾಗೂ ಕಲಬುರಗಿಯ ಬೆರಳಚ್ಚು ವಿಭಾಗದ ಆನಂದ ಮೇತ್ರಿ ಸೇರಿ 12 ಪೊಲೀಸ್ ಸಿಬ್ಬಂದಿಯನ್ನು ಅಮಾನತು ಮಾಡಲಾಗಿದೆ.
ಗೃಹ ಇಲಾಖೆಯು ಹೊರಡಿಸಿದ ಅಮಾನತು ಆದೇಶವನ್ನು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಇಶಾ ಪಂತ್ ಅವರಿಗೆ ಕಳಿಸಲಾಗಿತ್ತು. ಆದೇಶ ಪತ್ರಗಳನ್ನು ಸಿಬ್ಬಂದಿಯ ಮೂಲಕ ಇಲ್ಲಿನ ಐವಾನ್ ಇ ಶಾಹಿ ವಿಚಾರಣೆ ಎದುರಿಸುತ್ತಿರುವ ಮಲ್ಲಿಕಾರ್ಜುನ ಸಾಲಿ ಹಾಗೂ ಆನಂದ ಮೇತ್ರಿ ಅವರಿಗೆ ಶನಿವಾರ ತಲುಪಿಸಲಾಯಿತು.
ಇಬ್ಬರು ಪಿಎಸ್ಐ ಸೇರಿ 10 ಜನ ಸಿಬ್ಬಂದಿಯನ್ನು ಕಲಬುರಗಿ ಪೊಲೀಸ್ ಕಮಿಷನರ್ ಡಾ.ವೈ.ಎಸ್.ರವಿಕುಮಾರ್ ಅಮಾನತುಗೊಳಿಸಿದ್ದಾರೆ.
ಪಿಎಸ್ಐಗಳಾದ ಶ್ರೀಶೈಲಮ್ಮ, ನಜ್ಮಾ ಸುಲ್ತಾನಾ, ಎಎಸ್ಐಗಳಾದ ಶಶಿಕುಮಾರ್, ಲತಾ, ಹೆಡ್ ಕಾನ್ ಸ್ಟೆಬಲ್ ಗಳಾದ ಪಾರುಬಾಯಿ, ಜೈಭೀಮ್, ಶರಣಬಸಪ್ಪ, ದಾಮೋದರ್, ಪೊಲೀಸ್ ಕಾನ್ ಸ್ಟೆಬಲ್ ಗಳಾದ ಪ್ರದೀಪ, ರಾಜಶ್ರೀ ಅವರನ್ನು ಅಮಾನತುಗೊಳಿಸಿದ್ದಾಗಿ ಕಮಿಷನರ್ ತಿಳಿಸಿದ್ದಾರೆ.