545 ಹುದ್ದೆಗಳ PSI ಅಕ್ರಮ ನೇಮಕಾತಿ ಪ್ರಕರಣದಲ್ಲಿ ಭಾಗಿಯಾಗಿದ್ದಾರೆ ಎಂದು ಪ್ರಸ್ತುತ ಆಂತರಿಕ ಭದ್ರತಾ ವಿಭಾಗದ ಹೆಚ್ಚುವರಿ ಪೊಲೀಸ್ ಮಹಾನಿರ್ದೇಶಕ (ಎಡಿಜಿಪಿ)ರಾಗಿರುವ ಅಮೃತ್ ಪೌಲ್ ಅವರನ್ನು ಸಿಐಡಿ ಅಧಿಕಾರಿಗಳು ಬಂಧಿಸಿದ್ದಾರೆ.
ಹಿರಿಯ ಪೊಲೀಸ್ ಅಧಿಕಾರಿ ಅಮೃತ್ ಪೌಲ್ ಬಂಧನ ಪಿಎಸ್ಐ ಅಕ್ರಮ ನೇಮಕಾತಿಯಲ್ಲಿ ದೊಡ್ಡವರ ಕೈವಾಡವಿದೆ ಎಂಬುದಕ್ಕೆ ಸಾಕ್ಷಿಯಾಗಿದೆ. ಈ ಪ್ರಕರಣದಲ್ಲಿ ಡಿವೈಎಸ್ಪಿ ಆಗಿದ್ದ ಶಾಂತಕುಮಾರ್ರನ್ನು ಸಿಐಡಿ ಪೊಲೀಸರು ಈಗಾಗಲೇ ಬಂಧಿಸಿದ್ದಾರೆ. ಶಅಂತಕುಮಾರ್ ಅವರ ಮೂಲಕ 20 ವಿದ್ಯಾರ್ಥಿಗಳಿಂದ ಪ್ರತ್ಯೇಕವಾಗಿ 30 ಲಕ್ಷ ಹಣ ಪಡೆದ ಆರೋಪ ಇವರ ಮೇಲಿದೆ. ಈ ಹಣವನ್ನು ಸಿಐಡಿ ಪೊಲೀಸರು ಈಗಾಗಲೇ ವಶಪಡಿಸಿಕೊಂಡಿದ್ದಾರೆ ಎಂದು ತಿಳಿದುಬಂದಿದೆ.
4 ನೇ ಭಾರಿ ವಿಚಾರಣೆ ಬಂದಿದ್ದ ವೇಳೆ 1995 ನೇ ಬ್ಯಾಚ್ನ ಐಎಎಸ್ ಅಧಿಕಾರಿ ಅಮೃತ್ ಪೌಲ್ ಅವರನ್ನು ಸಿಐಡಿ ಪೊಲೀಸರು ಬಂಧಿಸಿದ್ದಾರೆ. ಇಂದು ಸಾಯಂಕಾಲವೇ ನ್ಯಾಯಾಲಯದ ಮುಂದೆ ಕರೆತರಲಿದ್ದಾರೆ ಎನ್ನಲಾಗಿದೆ.
ಅಮೃತ್ ಪೌಲ್ ಅವರು ಈ ಹಿಂದೆ ಪೊಲೀಸ್ ನೇಮಕಾತಿ ವಿಭಾಗದ ಎಡಿಜಿಪಿ ಆಗಿ ಕಾರ್ಯನಿರ್ವಹಿಸುತ್ತಿದ್ದರು. ಇವರ ಮೇಲೆ ಪಿಎಸ್ಐ ಅಕ್ರಮ ನೇಮಕಾತಿಯ ಆರೋಪ ಬಂದ ನಂತರ ಆಂತರಿಕ ಭದ್ರತಾ ವಿಭಾಗಕ್ಕೆ ವರ್ಗಾವಣೆ ಮಾಡಲಾಗಿತ್ತು.
ಈ ಮೊದಲೇ ಇವರನ್ನು ಸಿಐಡಿ ಪೊಲೀಸರು ವಿಚಾರಣೆ ಮಾಡಿದ್ದರೂ, ಇವರು ಬಾಯಿ ಬಿಟ್ಟಿರಲಿಲ್ಲ. ಇದೀಗ, ಪೊಲೀಸರು ಇವರನ್ನು ಸಾಕ್ಷ್ಯಾ ಸಮೇತ ಬಂಧಿಸಿದ್ದಾರೆ ಎಂದು ತಿಳಿದುಬಂದಿದೆ.
ಪಿಎಸ್ಐ ಅಕ್ರಮಕ್ಕೆ ಸಂಬಂಧಿಸಿದಂತೆ ರಾಜ್ಯ ಹೈಕೋರ್ಟ್ ಮೊದಲ ಬಾರಿಗೆ ರಾಜ್ಯ ಸರ್ಕಾರ ಮತ್ತು ಭ್ರಷ್ಠಾಚಾರ ನಿಗ್ರಹ ದಳದ ವಿರುದ್ಧ ತೀವ್ರ ಆಕ್ರೋಶ ವ್ಯಕ್ತಪಡಿಸಿತ್ತು.