ಪಿಎಸ್ಐ ಅಕ್ರಮ ನೇಮಕಾತಿ ಪ್ರಕರಣ ದಿನಕ್ಕೊಂದು ತಿರುವು ಪಡೆದುಕೊಳ್ಳುತ್ತಿದೆ. ಈಗಾಗಲೇ ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಕಿಂಗ್ಪಿನ್ ಎನ್ನಲಾಗಿದ್ದ ದಿವ್ಯಾ ಹಾಗರಗಿ ಸೇರಿದಂತೆ ಹಲವು ಜನರನ್ನು ಬಂಧಿಸಲಾಗಿದೆ. ಇದೀಗ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯನವರು ಸರ್ಕಾರ ನಡೆಸುತ್ತಿರುವ ಸಿಐಡಿ ತನಿಖೆಯ ಮೇಲೆ ನಮಗೆ ನಂಬಿಕೆಯಿಲ್ಲ. ನ್ಯಾಯಾಂಗ ತನಿಖೆಗೆ ವಹಿಸಬೇಕೆಂದು ಆಗ್ರಹಿಸಿದ್ದಾರೆ.
ಈ ಬಗ್ಗೆ ಮಾತನಾಡಿರುವ ಅವರು, ಪಿಎಸ್ಐ ನೇಮಕಾತಿಯಲ್ಲಿ ಭಾರೀ ಭ್ರಷ್ಟಾಚಾರ ನಡೆದಿದ್ದು, ಪ್ರಕರಣದ ಪ್ರಮುಖ ಆರೋಪ ದಿವ್ಯಾ ಹಾಗರಗಿ ಅವರೊಂದಿಗೆ ನಂಟಿದ್ದರೂ ಲಜ್ಜೆಗೆಟ್ಟು ಕುರ್ಚಿಗೆ ಅಂಟಿಕೊಂಡಿರುವ ಗೃಹ ಸಚಿವ ಆರಗ ಜ್ಞಾನೇಂದ್ರ ಅವರನ್ನು ಈ ಕೂಡಲೇ ಸಿಎಂ ಬೊಮ್ಮಾಯಿಯವರು ಸಂಪುಟದಿಂದ ವಜಾಗೊಳಿಸಬೇಕು.
ಸರ್ಕಾರ, ಸಚಿವರು, ರಾಜಕಾರಣಿಗಳು ಮತ್ತು ಅಧಿಕಾರಿಗಳ ಪಾತ್ರವಿಲ್ಲದೆ ಇಷ್ಟು ದೊಡ್ಡ ಮಟ್ಟದ ಭ್ರಷ್ಟಾಚಾರ ನಡೆಯಲು ಸಾಧ್ಯವಿಲ್ಲ. ಹೀಗಾಗಿ ಸಿಐಡಿ ತನಿಖೆಯಿಂದ ನ್ಯಾಯ ಸಿಗುವ ನಂಬಿಕೆ ನಮಗಿಲ್ಲ. ಸರ್ಕಾರ ಈ ಪ್ರಕರಣವನ್ನು ಹೈಕೋರ್ಟ್ ನ ಹಾಲಿ ನ್ಯಾಯಾಧೀಶರ ಮೇಲುಸ್ತುವಾರಿಯಲ್ಲಿ ನ್ಯಾಯಾಂಗ ತನಿಖೆಗೆ ಒಪ್ಪಿಸಬೇಕು
ಪಿಎಸ್ಐ ನೇಮಕಾತಿಯಲ್ಲಿ 5ನೇ ರ್ಯಾಂಕ್ ಪಡೆದ ದರ್ಶನ್ ಗೌಡ ಹಾಗೂ 10ನೇ ರ್ಯಾಂಕ್ ಪಡೆದ ನಾಗೇಶ್ ಗೌಡ ಎಂಬುವವರು ಸಚಿವ
ಡಾ.ಅಶ್ವತ್ಥ್ ನಾರಾಯಣ್ ಅವರ ಸಂಬಂಧಿಕರು. ಮೇಲ್ನೋಟಕ್ಕೆ ಈ ಹಗರಣದಲ್ಲಿ ಅಶ್ವಥ್ ನಾರಾಯಣ ಅವರ ಪಾತ್ರವೂ ಕಂಡುಬರುತ್ತಿದ್ದು, ಅವರನ್ನು ತಕ್ಷಣವೇ ಸಂಪುಟದಿಂದ ವಜಾ ಮಾಡಬೇಕು
ಪಿಎಸ್ಐ ನೇಮಕಾತಿ ಸಮಿತಿಯ ನೇತೃತ್ವ ವಹಿಸಿದ್ದ ಎಡಿಜಿಪಿ ಅಮೃತ್ ಪೌಲ್ ಹಾಗೂ ಡಿವೈಎಸ್ಪಿ ಶಾಂತ ಕುಮಾರ್ ಅವರನ್ನು ಬೇರೆ ಕಡೆಗೆ ವರ್ಗಾವಣೆ ಮಾಡಿದ್ದಾರೆ. ಈ ಮೂಲಕ ಅಕ್ರಮ ನೇಮಕಾತಿಯಲ್ಲಿ ಈ ಇಬ್ಬರ ಪಾತ್ರವೂ ಇದೆ ಎಂದರ್ಥ. ತಕ್ಷಣ ಇವರ ವಿರುದ್ಧ ಕೇಸ್ ದಾಖಲಿಸಿ, ಸೇವೆಯಿಂದ ಅಮಾನತು ಮಾಡಬೇಕು
ಕಲಬುರಗಿಯ ಜ್ಞಾನಜ್ಯೋತಿ ಸಂಸ್ಥೆ ಪಿಎಸ್ಐ ಪರೀಕ್ಷೆ ನಡೆಸಲು ಯೋಗ್ಯವಾದ ಪರೀಕ್ಷಾ ಕೇಂದ್ರವಾಗಿರಲಿಲ್ಲ ಎಂಬ ವರದಿ ಇದ್ದರೂ ಸ್ಥಳೀಯ ಪೊಲೀಸರು ಅದನ್ನು ಪರೀಕ್ಷಾ ಕೇಂದ್ರವಾಗಿ ಆಯ್ಕೆ ಮಾಡಿದ್ದಾರೆ. ಅಂದರೆ ಹಗರಣದಲ್ಲಿ ಶಾಮೀಲಾದ ಇನ್ನಷ್ಟು ಅಧಿಕಾರಿಗಳ ಹೆಸರು ಬಯಲಾಗಬೇಕಿದೆ ಎಂದು ಆಗ್ರಹಿಸಿದ್ದಾರೆ.
https://youtu.be/DWDJL7jLdi8