ಪಿಎಸ್ಐ ಅಕ್ರಮ ನೇಮಕಾತಿ ಪರೀಕ್ಷೆಗೆ ಸಂಬಂಧಿಸಿದಂತೆ ದಿನಕ್ಕೊಂದು ವಿಚಾರಗಳು, ಸಾಕ್ಷ್ಯಗಳು ಹೊರ ಬರುತ್ತಿವೆ. ಇದೀಗ, ಈ ಅಕ್ರಮ ನೇಮಕಾತಿಯಲ್ಲಿ ಪ್ರಭಾವಿ ಸಚಿವನ ಸಹೋದರ ಭಾಗಿಯಾಗಿದ್ದೇನೆ ಎಂದು ಕಾಂಗ್ರೆಸ್ ಆರೋಪಿಸಿದೆ.
ಪಿಎಸ್ಐ ಅಕ್ರಮ ನೇಮಕಾತಿಗೆ ಸಂಬಂಧಿಸಿದಂತೆ ಈಗಾಗಲೇ ಸಿಐಡಿ ಪ್ರಮುಖರನ್ನು ಬಂಧಿಸಿದೆ. ಇನ್ನೂ, ಇಬ್ಬರು ಬಂದು ಶರಣಾಗತರಾಗಿದ್ದಾರೆ. ಪಿಎಸ್ಐ ಪರೀಕ್ಷೆಯನ್ನು ರದ್ದು ಮಾಡಿ ಮರು ಪರೀಕ್ಷೆ ಮಾಡಲಾಗುವುದು ಎಂದು ಗೃಹ ಸಚಿವ ಆರಗ ಜ್ಞಾನೇಂದ್ರ ಈಗಾಗಲೇ ಘೋಷಿಸಿದ್ದಾರೆ.
ಈ ಅಕ್ರಮ ನೇಮಕಾತಿಯಲ್ಲಿ ಬೆಂಗಳೂರಿನ ಪ್ರಭಾವಿ ಸಚಿವನ ಸಹೋದರ ಭಾಗಿಯಾಗಿದ್ದಾನೆ. ಈತನೇ 3 ಜನರಿಗೆ ಡೀಲ್ ಮಾಡಿಸಿದ್ದಾನೆ ಎಂದು ಕಾಂಗ್ರೆಸ್ನ ವಿ.ಎಸ್.ಉಗ್ರಪ್ಪ ಅವರು ಗಂಭೀರ ಆರೋಪ ಮಾಡಿದ್ದಾರೆ.
ಅಲ್ಲದೇ, ಸಚಿವನ ಸಹೋದರನನ್ನು ಪೊಲೀಸರು ವಿಚಾರಣೆಗೆ ಕರೆತಂದಾಗ, ಸಚಿವರು ಕರೆ ಮಾಡಿ ಸಹೋದರನನ್ನು ಬಿಟ್ಟುಕಳುಹಿಸುವಂತೆ ಹೇಳಿದ್ದಾರೆ ಎಂದು ವಿ.ಎಸ್.ಉಗ್ರಪ್ಪ ಹೇಳಿದ್ದಾರೆ.
ದಿನಕ್ಕೊಂದು ತಿರುವು ಪಡೆಯುತ್ತಿರುವ ಪಿಎಸ್ಐ ಅಕ್ರಮ ನೇಮಕಾತಿ ಇದೀಗ ಸರ್ಕಾರದ ಸಚಿವರ ಮನೆಯಂಗಳ ತಲುಪಿದೆ. ಆ ಪ್ರಭಾವಿ ಸಚಿವ ಯಾರು..? ಸಹೋದರನ ಹೆಸರೇನು..? ಮಾಗಡಿ ಸಮೀಪದ ಆ 3 ಜನ ಅಭ್ಯರ್ಥಿಗಳ ಯಾರು ಎಂಬುದು ಇನ್ನಷ್ಟೇ ತಿಳಿದು ಬರಬೇಕಿದೆ.