ಪಿಎಸ್ಐ ನೇಮಕಾತಿ ಅಕ್ರಮ ಪ್ರಕರಣ ಕುರಿತಾದ ಸತ್ಯಾಂಶ ತಿಳಿಯುವ ಸಲುವಾಗಿ ರಾಜ್ಯ ಸರ್ಕಾರ ರಚಿಸಿರುವ ಜಸ್ಟೀಸ್ ವೀರಪ್ಪ ನೇತೃತ್ವದ ಆಯೋಗ ಮಾಜಿ ಸಿಎಂ ಕುಮಾರಸ್ವಾಮಿ, ಬಿಜೆಪಿ ಶಾಸಕ ಯತ್ನಾಳ್, ಮಾಜಿ ಡಿಸಿಎಂ ಅಶ್ವಥ್ ನಾರಾಯಣ್ ಸೇರಿದಂತೆ ಹಲವರಿಗೆ ಸಮನ್ಸ್ ಜಾರಿಗೊಳಿಸಿದೆ.
ಪ್ರಕರಣದ ಕುರಿತಾಗಿ ತಮ್ಮ ಬಳಿ ಸಾಕ್ಷ್ಯಾಧಾರಗಳಿವೆ ಎಂದು ಹೆಚ್.ಡಿ.ಕುಮಾರಸ್ವಾಮಿ, ಬಸನಗೌಡ ಪಾಟೀಲ್ ಯತ್ನಾಳ್, ಧಡೇಸಗೂರು ಬಸವರಾಜ್, ಮಾಜಿ ಡಿಸಿಎಂ ಅಶ್ವತ್ಥ್ ನಾರಾಯಣ್ ಹೇಳಿಕೊಂಡಿದ್ದರು. ಈ ಹಿನ್ನೆಲೆಯಲ್ಲಿ ಇವರೆಲ್ಲರ ವಿಚಾರಣೆ ನಡೆಸಬೇಕೆಂಬ ದೂರುಗಳು ಆಯೋಗಕ್ಕೆ ಬಂದಿವೆ. ದೂರುದಾರರ ಮನವಿ ಹಿನ್ನೆಲೆ ನ್ಯಾ.ಬಿ.ವೀರಪ್ಪ ಆಯೋಗ ಮೇಲೆ ತಿಳಿಸಲಾದ ಎಲ್ಲರಿಗೂ ಸಮನ್ಸ್ ಜಾರಿ ಮಾಡಿದ್ದು, ಸಾಕ್ಷ್ಯಗಳಿ ದ್ದರೆ ಹಾಜರುಪಡಿಸುವಂತೆ ಸೂಚಿಸಲಾಗಿದೆ.
2021ರ ಜನವರಿ 21 ರಂದು ಪಿಸ್ಐ 545 ಖಾಲಿ ಹುದ್ದೆಗಳಿಗೆ ನೇರ ನೇಮಕಾತಿ ಮೂಲಕ ಭರ್ತಿ ಮಾಡಲು ಅಧಿಸೂಚನೆ ಹೊರಡಿಸಲಾಗಿತ್ತು. ಅಕ್ಟೋಬರ್ 3 ರಂದು ರಾಜ್ಯದ 92 ಕೇಂದ್ರಗಳಲ್ಲಿ 54,041 ಅಭ್ಯರ್ಥಿಗಳು ಲಿಖಿತ ಪರೀಕ್ಷೆಯನ್ನು ನಡೆದಿತ್ತು. ಈ ಪರೀಕ್ಷೆಯಲ್ಲಿ ಕೋಟಿ ಕೋಟಿ ಪಡೆದು, ಕೆಲವೊಂದು ಪರೀಕ್ಷಾ ಕೇಂದ್ರದಲ್ಲಿ ಅಭ್ಯರ್ಥಿಗಳಿಗೆ ಪರೀಕ್ಷೆ ಬರೆಯಲು ಸಹಾಯ ಮಾಡಲಾಗಿದೆ ಎಂಬ ಆರೋಪ ಕೇಳಿಬಂದ ಹಿನ್ನೆಲೆಯಲ್ಲಿ ಆಗಿನ ಬಿಜೆಪಿ ಸರ್ಕಾರ ಈ ಪ್ರಕರಣವನ್ನು ಸಿಐಡಿ ತನಿಖೆಗೆ ನೀಡಿತ್ತು.
ರಾಜ್ಯದ ವಿವಿಧ ಪೊಲೀಸ್ ಠಾಣೆಗಳಲ್ಲಿ ತಾತ್ಕಾಲಿಕ ಆಯ್ಕೆ ಪಟ್ಟಿಯಲ್ಲಿನ 52 ಅಭ್ಯರ್ಥಿಗಳನ್ನು ಒಳಗೊಂಡ ಇತರೆ ಆರೋಪಿಗಳ ವಿರುದ್ಧ ಕ್ರಿಮಿನಲ್ ಪ್ರಕರಣ ದಾಖಲಿಸಲಾಗಿತ್ತು. ನಂತರ ಆರೋಪಿತ 52 ಅಭ್ಯರ್ಥಿಗಳು ಕಾನೂನುಬಾಹಿರವಾಗಿ ಪರೀಕ್ಷೆ ಬರೆದಿರುವು ದೃಢಪಟ್ಟಿರುವ ಹಿನ್ನೆಲೆ 1977ರ ಕರ್ನಾಟಕ ನಾಗರಿಕ ಸೇವೆಗಳು ನಿಯಮಗಳ ಪ್ರಕಾರ ಪೊಲೀಸ್ ಇಲಾಖೆ ನಡೆಸುವ ಎಲ್ಲಾ ವೃಂದದ ಹುದ್ದೆಗಳ ನೇಮಕಾತಿಯಲ್ಲಿ ಭಾಗವಹಿಸಲು ಶಾಶ್ವತವಾಗಿ ನಿಷೇಧಿಸಲಾಗಿತ್ತು.
ಈ ಪ್ರಕರಣದ ತನಿಖೆಯನ್ನು ಕಾಂಗ್ರೆಸ್ ಅಧಿಕಾರಕ್ಕೆ ಬಂದ ಕೂಡಲೆ ಚುರುಕುಗೊಳಿಸೋದಾಗಿ ಹೇಳಿತ್ತು. ಅದರಂತೆ ಇದೀಗ ಕ್ಷಿಪ್ರ ತನಿಖೆ ನಡೆಯುತ್ತಿದೆ.
ಅಭ್ಯರ್ಥಿಗಳು ಕೊಟ್ಟ ಮಾಹಿತಿ ಆಧರಿಸಿ ರಾಜಕಾರಣಿಗಳಿಗೆ ನೋಟಿಸ್ ನೀಡಲಾಗಿದೆ. ನಾಳೆ ಬೆಳಗ್ಗೆ 11 ಗಂಟೆಗೆ ಆಯೋಗದ ಮುಂದೆ ಹಾಜರಾಗಿ ಹೇಳಿಕೆ ದಾಖಲಿಸಲು ನೋಟಿಸ್ ನಲ್ಲಿ ತಿಳಿಸಲಾಗಿದೆ.