ಪಿಎಸ್ಐ ಹುದ್ದೆ ಕೊಡಿಸೋದಾಗಿ ಕನಕಗಿರಿ ಶಾಸಕ 15ಲಕ್ಷ ತೆಗೆದುಕೊಂಡಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಮತ್ತೊಂದು ಆಡಿಯೋ ರಿಲೀಸ್ ಆಗಿದೆ.
ಹಣದ ಮಾತುಕತೆಯ ಆಡಿಯೋ ವೈರಲ್ ಆಗುತ್ತಲೇ ಹಣ ಕೊಟ್ಟಿದ್ದ ಮಾಜಿ ಪೊಲೀಸ್ ಪರಸಪ್ಪರನ್ನು ಕುಷ್ಟಗಿಗೆ ಕರೆಯಿಸಿದ ಶಾಸಕ ಬಸವರಾಜ ದಡೇಸೂಗೂರು ಧಮ್ಕಿ ಹಾಕಿದ್ದಾರೆ.
ಸೂ ಮಗನೇ, ಬೋ ಮಗನೇ ಎಂದು ಅಶ್ಲೀಲ ಪದಗಳಿಂದ ನಿಂದಿಸಿ ಒಂದು ಹಂತದಲ್ಲಿ ಹಲ್ಲೆಗೂ ಯತ್ನಿಸಿದ್ದಾರೆ. ಆದರೆ ಇತರರು ಶಾಸಕರನ್ನು ಸುಮ್ಮನಾಗಿಸಿದ್ದಾರೆ. ಇದಕ್ಕೆ ಪರಸಪ್ಪ, ಇಂತಹ ಮಾತುಗಳನ್ನು ಸಹಿಸಲು ಆಗಲ್ಲ ಎಂದು ಎದುರಿಗೆ ತಿರುಗೇಟು ನೀಡಿದ್ದಾರೆ.
ಈ ಆಡಿಯೋದಲ್ಲಿಯೂ ಪಿಎಸ್ಐ ನೇಮಕಾತಿಗಾಗಿ 15 ಲಕ್ಷ ಹಣ ಪಡೆದಿರೋದನ್ನು ಶಾಸಕ ಬಸವರಾಜ ದಡೇಸೂಗೂರು ಒಪ್ಪಿಕೊಂಡಿದ್ದಾರೆ. ನಾನೇನು ದುಡ್ಡು ಕೊಡು ಅಂತ ನಿಮ್ಮನೆ ಬಳಿ ಬಂದಿದ್ನ.. ನಿಮ್ಮ ಅಗತ್ಯ ತಂದು ಕೊಟ್ಟಿದ್ದೀರಿ, ಈ ರೀತಿ ತುಂಬಾ ಜನ ಹಣ ಕೊಟ್ಟಿದ್ದಾರೆ.. ಕೆಲಸ ಮಾಡಿಸಿಕೊಟ್ಟಿದ್ದೇನೆ. ಹಾಗಂತ ಮೀಡಿಯಾಗೆ ಹೋಗ್ತಿನಿ ಅಂತಿಯೇನೋ.. ಹೋಗು.. ನಾನು ಶಾಸಕ ಇದ್ದೀನಿ.. ನನ್ನೇನು ಮಾಡೋಕೆ ಆಗಲ್ಲ. ಅದೇನು ಮಾಡ್ಕೊತೀಯ ಮಾಡ್ಕೋ ಎಂದು
ಬಸವರಾಜ ದಡೇಸೂಗೂರು ಅವಾಜ್ ಹಾಕಿದ್ದಾರೆ.
ಇಷ್ಟೆಲ್ಲ ಬೆಳವಣಿಗೆ ನಡೆಯುತ್ತಿದ್ದರೂ ಪಿಎಸ್ಐ ಪ್ರಕರಣದ ತನಿಖೆ ನಡೆಸಿರುವ ಸಿಐಡಿ ಸುಮ್ಮನೆ ಇದೆ. ಇದು ಹಲವು ಅನುಮಾನಗಳಿಗೆ ಎಡೆ ಮಾಡಿಕೊಡುತ್ತಿದೆ. ಆಡಿಯೋದಲ್ಲಿ ಬಸವರಾಜ ದಡೇಸೂಗೂರು ಹಣ ಪಡೆದಿರೋದು ಸ್ಪಷ್ಟವಾಗಿ ಗೊತ್ತಾಗುತ್ತಿದ್ದರೂ ತನಿಖಾ ತಂಡ ಜಾಣ ಮೌನ ವಹಿಸಿದಂತೆ ಕಂಡುಬರುತ್ತಿದೆ. ಸರ್ಕಾರ ಪ್ರಭಾವ ಬೀರಿದ್ಯಾ ಎಂಬ ಪ್ರಶ್ನೆ ಮೂಡುತ್ತದೆ.