ಅದು ಮಾರ್ಚ್ 30.. ಗೆಳೆಯರಿಬ್ಬರು ಪಬ್ ಜಿ ಆಡುತ್ತಾ ಇದ್ದರು. ಆಟ ಮಧ್ಯದಲ್ಲಿ ಇರುವಾಗಲೇ ಒಬ್ಬ ಊರಿಗೆ ಹೋಗಲು ರೈಲಿಗೆ ಟೈಮ್ ಆಯ್ತು ಎಂದು ಹೊರಟ. ಇದು ಇನ್ನೊಬ್ಬನಿಗೆ ಹಿಡಿಸಲಿಲ್ಲ. ಕೂಡಲೇ ಫೋನ್ ಎತ್ತಿಕೊಂಡು ರೈಲ್ವೆ ಸಹಾಯವಾಣಿಗೆ ಕರೆ ಮಾಡಿ ಬೆಂಗಳೂರಿನ ಯಲಹಂಕ ರೈಲು ನಿಲ್ದಾಣದಲ್ಲಿ ಬಾಂಬ್ ಇದೆ. ಯಾವುದೇ ಕ್ಷಣದಲ್ಲಿ ಸ್ಪೋಟಿಸಬಹುದು.. Be Alert ಎಂದು ಬಿಟ್ಟ.
ಆ ಹೊತ್ತಿಗೆ ಯಲಹಂಕ ನಿಲ್ದಾಣದಲ್ಲಿ ಹೊರಡಲು ಕಾಚಿಗುಡ ಎಕ್ಸ್ ಪ್ರೆಸ್ ರೆಡಿಯಾಗಿತ್ತು. ಕೂಡಲೇ ಅದನ್ನು ಸ್ಟಾಪ್ ಮಾಡಿಸಿ ಸುಮಾರು ಎರಡು ಗಂಟೆ ಇಡೀ ನಿಲ್ದಾಣ, ರೈಲು ಬೋಗಿಗಳಲ್ಲಿ ತಪಾಸಣೆ ನಡೆಸಿದಾಗ ಯಾವ ಬಾಂಬ್ ಸಹ ಪತ್ತೆ ಆಗಲಿಲ್ಲ. ಇದು ಹುಸಿ ಕರೆ ಎಂದು ಗೊತ್ತಾಗಿ ನಿಟ್ಟುಸಿರು ಬಿಟ್ಟರು. ಪ್ರಯಾಣಿಕರು ಗಾಬರಿಗೊಂಡಿದ್ದರು.
ಮತ್ತೊಂದು ತಂಡ ಕರೆ ಮಾಡಿದವರ ಶೋಧಕ್ಕೆ ಮುಂದಾದಾಗ ಸಿಕ್ಕಿದ್ದು 12 ವರ್ಷದ ಬಾಲಕ. ಯಾಕೆ ಹೀಗೆ ಅಂದ್ರೆ, ಪಬ್ ಜಿ ಆಟ ಅರ್ಧಕ್ಕೆ ನಿಂತಿತ್ತು. ಗೆಳೆಯನನ್ನು ಊರಿಗೆ ಹೋಗೋದು ತಡೆಯಬೇಕಿತ್ತು. ಅದಕ್ಕೆ ಹೀಗೆ ಮಾಡಿದೆ ಎಂದು ಬಾಲಕ ಹೇಳಿದ.
ಕೊನೆಗೆ ಈತ ಅಪ್ರಾಪ್ತ ಎಂಬ ಕಾರಣಕ್ಕೆ ಬಾಲಕನಿಗೆ ಬುದ್ಧಿ ಹೇಳಿ, ಪೋಷಕರಿಗೆ ಒಂದಿಷ್ಟು ಸಲಹೆ ಸೂಚನೆ ನೀಡಿ ರೈಲ್ವೆ ಪೊಲೀಸರು ಕಳಿಸಿಕೊಟ್ಟಿದ್ದಾರೆ.